ಕಾರಿನಲ್ಲಿ ಬಂದು ಭಾಸ್ಕರ ನಾಯ್ಕ ಹಾಗೂ ಅವರ ಪತ್ನಿಗೆ ಹಲ್ಲೆ ನಡೆಸಿದ ಆರೋಪ: ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ಮೇಲೆ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ: ಮಂಗಳೂರಿನಲ್ಲಿ ಯೂ ಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿ ಹಿಂದುರುಗುತ್ತಿದ್ದ ತನಗೆ ಹಲ್ಲೆ ನಡೆಸಿ, ಅವಾಚ್ಯಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದರೆಂದು ಆರೋಪಿಸಿ, ಉಜಿರೆ ಗ್ರಾಮದ ಪಣೆಯಾಲು ಭಾಸ್ಕರ್ ನಾಯ್ಕ (50ವ) ಎಂಬವರು ನೀಡಿದ ದೂರಿನ ಹಿನ್ನಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ಮೇಲೆ ಸೆ.3 ರಂದು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


ಮಂಗಳೂರಿನಲ್ಲಿ ಯೂ ಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿ ತಾನು ವಾಪಾಸು ತನ್ನ ಮನೆಗೆ ಬರುತ್ತಾ ಸಂಜೆ ಸಮಯ ಉಜಿರೆ ಗ್ರಾಮದ ಪಾಣೆಯಾಲು ಎ೦ಬಲ್ಲಿಗೆ ತಲುಪಿದಾಗ ಆರೋಪಿಗಳು ಕಾರಿನಲ್ಲಿ ಬಂದು ಅಡ್ಡವಾಗಿ ನಿಲ್ಲಿಸಿ, ಅಕ್ರಮ ಕೂಟ ಸೇರಿಕೊಂಡ ಮಹೇಶ್ ಶೆಟ್ಟಿ ತಿಮರೋಡಿ, ಮೋಹನ್ ಶೆಟ್ಟಿ ಪಾಣಿಯಾಲು, ಮುಖೇಶ್ ಶೆಟ್ಟಿ, ಪ್ರಜ್ವಲ್ ವಿ. ಗೌಡ, ನೀತು ಶೆಟ್ಟಿ ಪಾಣಿಯಾಲು, ಮತ್ತು ಪ್ರಮೋದ್ ಶೆಟ್ಟಿ ಇತರರು ನನಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ, ನನ್ನನ್ನು ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಕಲ್ಲಿನಿಂದ ಹಲ್ಲೆ ನಡೆಸಿದಾಗ, ನಾನು ಜೋರಾಗಿ ಬೊಬ್ಬೆ ಹೊಡೆದಿದ್ದು, ಹತ್ತಿರ ಮನೆಯಲಿದ್ದ ನನ್ನ ಪತ್ನಿ ಮಮತಾ ಓಡಿ ಬಂದಾಗ, ಪ್ರಮೋದ್ ಶೆಟ್ಟಿ ಎಂಬಾತ ಅವಳಿಗೂ ಕಲ್ಲಿನಿಂದ ಹೊಡೆದರು ಆಗ ಇಬ್ಬರೂ ಜೋರಾಗಿ ಬೊಬ್ಬೆ ಹೊಡೆಯುತ್ತಿದ್ದಾಗ ಅಲ್ಲಿಯೇ ಬರುತ್ತಿದ್ದ ಪರಿಚಯದ ಜಯಪ್ರಕಾಶ್ ಶೆಟ್ಟಿ, ಶಂಕರ ಶೆಟ್ಟಿ ತಿಮರೋಡಿ, ಸುರೇಶ್ ನಾಯ್ಕ ಮತ್ತು ಇತರರನ್ನು ನೋಡಿ ಆರೋಪಿಗಳು ಹಲ್ಲೆಗೆ ಬಳಸಿದ ಕಲ್ಲನ್ನು ಸ್ಥಳದಲ್ಲಿ ಬಿಸಾಡಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಭಾಸ್ಕರ ನಾಯ್ಕ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.


ಭಾಸ್ಕರ್ ನಾಯ್ಕ ಅವರು ಆಸ್ಪತ್ರೆಗೆ ದಾಖಲಾಗಿ ಈ ದೂರನ್ನು ನೀಡಿದ್ದಾರೆ. ಯೂ ಟ್ಯೂಬ್ ಚಾನಲ್‌ನಲ್ಲಿ, ಸಂದರ್ಶನ ನೀಡಿದ ಕಾರಣಕ್ಕೆ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

error: Content is protected !!