ಬೆಳ್ತಂಗಡಿ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಶಾಂತಿಯುತ ಪ್ರತಿಭಟನೆಯನ್ನು ಕೈ ಬಿಡಲಾಗಿದೆ. ಹಾಗೂ ಮೂಲ ಬೇಡಿಕೆ ಈಡೇರಿಸುವಂತೆ ಆ. 20 ರಿಂದ ಬೃಹತ್ ಪ್ರತಿಭಟನೆಗೆ ನಿರ್ಧಾರ ಮಾಡಿದೆ. ಹಾಗೂ ಜಿಲ್ಲಾ ಪಂಚಾಯತಿಯಿಂದ 7515 ಸಿಬ್ಬಂದಿಗಳಿಗೆ ಘಟನೋತ್ತರವಾಗಿ ಅನುಮೋದ ನೀಡಲು ಸರಕಾರ ತೀರ್ಮಾನ ಮಾಡಿದೆ.
ರಾಜ್ಯದ ಗ್ರಾಮ ಪಂಚಾಯಿತಿ ನೌಕರರು ವಿವಿಧ ಬೇಡಿಕೆಯನ್ನು ಈಡೇರಿಸುವ ಬಗ್ಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್ ಡಿ ಪಿ ಆರ್ ರಾಜ್ಯ ಸಮಿತಿ ಬೆಂಗಳೂರು ರಾಜ್ಯಾಧ್ಯಕ್ಷರಾದ ಡಾ. ದೇವಿಪ್ರಸಾದ್ ಬೊಲ್ಮ ಇವರ ನೇತೃತ್ವದಲ್ಲಿ ಮಾರ್ಚ್ 1 ರಿಂದ ನಿರಂತರವಾಗಿ ಈ ದಿನದ ತನಕ 16 ದಿನಗಳ ಕಾಲ ಶಾಂತಿಯುತವಾಗಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಚೇರಿ ವೇಳೆಯಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಿಭಿನ್ನ ರೀತಿಯಲ್ಲಿ ಕೈತೋಳಿಗೆ ಕಪ್ಪುಪಟ್ಟಿ ಧರಿಸಿ ಶೋಷಣೆ ಮುಕ್ತ ಬದುಕಿಗಾಗಿ ಪ್ರತಿಭಟನೆ/ಚಳುವಳಿ ಯಶಸ್ವಿಯಾಗಿ ನಡೆಸಿದರು.
ಮುಂದಿನ ದಿನಗಳಲ್ಲಿ ಬೃಹತ್ ಹೋರಾಟದ ಮೂಲಕ ಗ್ರಾಮ ಪಂಚಾಯಿತಿ ನೌಕರರ ಮೂಲ ಬೇಡಿಕೆಯ ಆಸೆ ಆಕಾಂಕ್ಷೆಗಳ ನಂಬಿಕೆಯನ್ನು ತಲುಪುವ ಕೆಲಸ ಶ್ರೇಯೋಭಿವೃದ್ಧಿ ಸಂಘಟನೆಯದ್ದಾಗಿದೆ. ಆದ್ದರಿಂದ ಶೋಷಣೆ ಮುಕ್ತ ಬದುಕಿಗಾಗಿ ಆಗಸ್ಟ್ 20 ರಿಂದ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ ಬೆಂಗಳೂರು ವಿಧಾನಸೌಧ ಮುಂಭಾಗ ಬೃಹತ್ ಪ್ರತಿಭಟನೆಯನ್ನು ಮಾಡುವುದಾಗಿ ರಾಜ್ಯ ಸಂಘಟನೆಯಿಂದ ತೀರ್ಮಾನಿಸಲಾಗಿದೆ ಎಂದು ರಾಜ್ಯದ ನೌಕರರು ನಿರಾಶೆಗೊಳಗಾಗದೆ ಸಹಕರಿಸುವಂತೆ, ಪದ್ಮನಾಭ ಆರ್ ಕುಲಾಲ್, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ಸರಕಾರದ ಆದೇಶ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ 64 ಬೇಡಿಕೆ ಹಾಗೂ ಸಮಸ್ಯೆಗಳ ಪಟ್ಟಿಯನ್ನು ನೀಡಲಾಗಿತ್ತು. ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ 31.10.2017 ರ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಎಲ್ಲಾ ದಾಖಲೆಗಳು ಸರಿ ಇದ್ದು ಅನುಮೋದನೆಗೊಳ್ಳದೆ ಬಾಕಿ ಇರುವ ಸಿಬ್ಬಂದಿಗಳಿಗೆ ಸರಕಾರದ ಆದೇಶ ಸಂಖ್ಯೆ ಕೆ ಪಿ ಆರ್ ಸಿ -ಜಿ ಪಿ ಎ 450/2023 ಬೆಂಗಳೂರು ದಿನಾಂಕ 16.03.2024 ರಂತೆ ರಾಜ್ಯದ 7515 ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯಿತಿಯಿಂದ ಘಟನೋತ್ತರವಾಗಿ ಮಂಜೂರಾತಿ ನೀಡಲು ಸರಕಾರ ನಿರ್ದೇಶಕರು ಆಡಳಿತ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶವನ್ನು ನೀಡಿರುತ್ತಾರೆ.