ವೇಣೂರು: ಸುಮಾರು 800 ವರ್ಷಗಳ ಇತಿಹಾಸವಿರುವ ಹೇರ್ದಂಡಿ ಬಾಕ್ಯಾರು ಕ್ಷೇತ್ರವು ಕೊಕ್ರಾಡಿ ಅಂಡಿಂಜೆಯ ಭಕ್ತರ ಸಹಕಾರದಿಂದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮ ಕುಂಭಾಭಿಷೇಕಕ್ಕೆ ಸಿದ್ದಗೊಂಡಿದೆ. ಕ್ಷೇತ್ರಕ್ಕೆ ಸ್ವಂತ 40ಸೆಂಟ್ಸ್ ಜಾಗವಿದೆ. ಸುಮಾರು 70 ವರ್ಷಗಳಿಂದ ನಿರಂತರ ಇಲ್ಲಿ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಸುತ್ತಾ ಬರಲಾಗುತ್ತಿದೆ. ನೂತನವಾಗಿ ಪುನರ್ ನಿರ್ಮಿಸಿದ ಕೊಕ್ರಾಡಿಯ ಬಾಕ್ಯಾರು ಹೇರ್ದಂಡಿ ಶ್ರೀ ದೈವ ಕೊಡಮಣಿತ್ತಾಯ ದೈವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿಯಲ್ಲಿ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕ, ನೇಮೋತ್ಸವವು ಮಾ. 26 ರಿಂದ 29ರವರೆಗೆ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಜರಗಲಿದೆ ಎಂದು ಜೀರ್ಣೋಧ್ದಾರ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಹೇಳಿದರು.
ಕ್ಷೇತ್ರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ನಿರಂತರ ಒಂದು ತಿಂಗಳಿನಿಂದ ಶ್ರಮದಾನ ನಡೆಯುತ್ತಿದ್ದು ಹೆಚ್ಚಿನ ಎಲ್ಲಾ ಕೆಲಸಗಳು ಶ್ರಮದಾನದಲ್ಲಿ ಸಾಗುತ್ತಿದೆ. ಇಗಾಗಲೇ ಕ್ಷೇತ್ರದ ಅಭಿವೃದ್ಧಿ ದೃಷ್ಡಿಯಿಂದ 1.80 ಕೋಟಿ ವೆಚ್ಚದ ಯೋಜನೆ ಹಾಕಿ 1.30 ಕೋಟಿಯ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಸರಕಾರದಿಂದ ಅನುದಾನ ಮಂಜೂರುಗೊಳಿಸುವ ಬಗ್ಗೆ ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪ್ರಸಾದ ರೂಪದಲ್ಲಿ ಆರ್ಥಿಕ ಸಹಕಾರ ನೀಡಿದ್ದಾರೆ ಎಂದರು.
ವಿಶೇಷವಾಗಿ ಕೋಟಿ ಚೆನ್ನಯರ ಪ್ರತ್ಯೇಕವಾದ 900 ಕೆಜೆ ತೂಕವಿರುವ ಐದೂವರೆ ಪೀಟ್ ಎತ್ತರದ ಮೂರ್ತಿಯನ್ನು ಶಿಲಾಮಯವಾಗಿ ರಚಿಸಲಾಗಿದೆ. ಮುದಿನ ದಿನಗಳಲ್ಲಿ ಶಾಶ್ವತ ಯೋಜನೆಯಾಗಿ ಸಮುದಾಯ ಭವನ ರಚನೆ, ಅನ್ನಛತ್ರ ನಿರ್ನಾಣ, ಸುತ್ತುಪೌಳಿ ಹಾಗೂ ಇನ್ನಿತರ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಮಾ. 26 ರಂದು ಬೆಳಿಗ್ಗೆ ಶಿಲ್ಪಿಗಳಿಂದ ಆಲಯ ಪರಿಗ್ರಾಹ, ದೇವತಾ ಪ್ರಾರ್ಥನೆಯೊಂದಿಗೆ ವೈದಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಇನ್ನಿತ್ತರ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ಗಂಟೆ 4 ರಿಂದ ಕೊಕ್ರಾಡಿಯ ಅತ್ರಿಜಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಭವ್ಯ ಮೆರವಣಿಗೆ ಮೂಲಕ ಹೊರೆಕಾಣಿಕೆ ಶ್ರೀ ಕ್ಷೇತ್ರಕ್ಕೆ ಸಾಗಿ ಬರಲಿದೆ. ಬಳಿಕ ಧಾರ್ಮಿಕ ಸಭೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ದೇವೇಂದ್ರ ಹೆಗ್ಡೆ ಕೊಡಂಗೆಗುತ್ತು ವಹಿಸಲಿದ್ದು,
ಗುರುವಾಯನಕೆರೆ ಎಕ್ಸೆಲ್ ಪ.ಪೂ. ಕಾಲೇಜಿನ ಪ್ರಾಚಾರ್ಯರಾದ ಡಾ| ನವೀನ್ ಕುಮಾರ್ ಮರಿಕೆ ಧಾರ್ಮಿಕ ಉಪನ್ಯಾಸ ನೀಡಲಿದ್ದು, ಹಲವು ಅತಿಥಿ ಗಣ್ಯರು ಭಾಗವಹಿಸಲಿದ್ದಾರೆ.
ಮಾ. 27 ರಂದು ಬೆಳಿಗ್ಗೆ ನವಗ್ರಹ ಹೋಮ, ಶ್ರೀ ಕೊಡಮಣಿತ್ತಾಯ ದೈವದ ಪ್ರತಿಷ್ಠೆ, ಶ್ರೀ ಬ್ರಹ್ಮಬೈದರ್ಕಳ ಪ್ರತಿಷ್ಠೆ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ ಜರಗಲಿದೆ. ಸಂಜೆ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ವಹಿಸಲಿದ್ದು, ಕುದ್ರೋಳಿ ನಾರಾಯಣಗುರು ಪ.ಪೂ. ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಉಪನ್ಯಾಸ ನೀಡಲಿದ್ದಾರೆ.
ಮಾ. 28 ರಂದು ಬೆಳಿಗ್ಗೆ ದುರ್ಗಾಹೋಮ, ಶ್ರೀ ದೈವ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಕುಂಭಾಭಿಷೇಕ ಜರಗಲಿದೆ.
ರಾತ್ರಿ 9 ಗಂಟೆಯಿಂದ ಶ್ರೀ ದೈವ ಕೊಡಮಣಿತ್ತಾಯ, ಶ್ರೀ ಹೇರ್ದಂಡಿ ದೈವದ ನೇಮೋತ್ಸವ ನಡೆಯಲಿದೆ.
ಮಾ. 29 ರಂದು ರಾತ್ರಿ ೮-೩೦ರಿಂದ ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪಾರ್ಶ್ವನಾಥ ಬಂಗ ಸಾಲ್ಯೂರುಗುತ್ತು,ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಕೊಕ್ರಾಡಿ ಹಿರ್ತೊಟ್ಟುಗುತ್ತು,ಕೋಶಾಧಿಕಾರಿ ಸೂರ್ಯನಾರಾಯಣ ಡಿ.ಕೆ ಶ್ರೀ ಹರಿ,ಆಡಳಿತ ಸಮಿತಿ ಕೋಶಾಧಿಕಾರಿ ಪ್ರಕಾಶ್ ಕುಮಾರ್ ಜೈನ್ ಹೊಸಮನೆಗುತ್ತು, ಮಂಜಪ್ಪ ಕೊಕ್ರಾಡಿ, ಲಕ್ಷ್ಮಣ ಕೋಟ್ಯಾನ್, ರಂಗರಾಜ್, ಚಂದ್ರಕಾಂತ್ ಉಪಸ್ಥಿತರಿದ್ದರು.