25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ: ರೂ. 25.82 ಲಕ್ಷ ನಿವ್ವಳ ಲಾಭ – ಸದಸ್ಯರಿಗೆ ಶೇ.10 ಡಿವಿಡೆಂಡ್

ಬೆಳ್ತಂಗಡಿ: 2023-2024ನೇ ಸಾಲಿನಲ್ಲಿ ಸಂಘವು ರೂ.25.82 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.10 ಪಾಲು ಮುನಾಫೆ (ಡಿವಿಡೆಂಡ್) ಘೋಷಿಸಲಾಗಿದೆ. ಜೊತೆಗೆ ಸಂಘಕ್ಕೆ ರಬ್ಬರು ಮಾರಾಟ ಮಾಡಿದ ಸದಸ್ಯರಿಗೆ ಕಿಲೋ ಒಂದರ ರೂ. 1.00 ರಂತೆ ಗರಿಷ್ಠ ರೂ.5000 ಮಿತಿಗೊಳಪಟ್ಟು ಖರೀದಿ ಬೋನಸ್ ನೀಡುವುದಾಗಿ ತೀರ್ಮಾನಿಸಲಾಗಿದೆ ಎಂದು ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಇದರ ಅಧ್ಯಕ್ಷ ಶ್ರೀಧರ ಜಿ.ಭಿಡೆ ಹೇಳಿದರು.

ಅವರು ಆ.22ರಂದು ಉಜಿರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 1985 ರಲ್ಲಿ ದಿ| ಜಿ. ಎನ್. ಭಿಡೆಯವರ ನೇತೃತ್ವದಲ್ಲಿ ಸ್ಥಾಪನೆಗೊಂಡು ತನ್ನ ವಿಶಿಷ್ಟ ಸಾಧನೆಯ ಮೂಲಕ ಕರ್ನಾಟಕ ರಾಜ್ಯದಾದ್ಯಂತ ಹೆಸರು ಗಳಿಸಿ, ಜಿಲ್ಲೆಯ ಅತ್ಯುತ್ತಮ ಸಹಕಾರಿ ಸಂಘಗಳಲ್ಲಿ ಒಂದು ಎಂಬ ಹೆಸರು ಗಳಿಸಿದೆ. ಸಂಘವು ತೋಟತ್ತಾಡಿ, ಅರಸಿನಮಕ್ಕಿ, ಶಿಬಾಜೆ, ಇಂದಬೆಟ್ಟು ಕಡಿರುದ್ಯಾವರ, ಸಾಗರ, ಉಪ್ಪಿನಂಗಡಿ, ಮೂರ್ಜೆಕಾವು, ವಿಟ್ಲ, ತೀರ್ಥಹಳ್ಳಿಶಿರ್ತಾಡಿ, ಮುಂಡಾಜೆ, ಈಶ್ವರಮಂಗಲ, ಮುಂಡ್ರುಪ್ಪಾಡಿ, ನಿಡ್ಲೆ, ಪಾಣಾಜೆ, ಗುರುವಾಯನಕೆರೆಗಂಡಿಬಾಗಿಲು, ಕಾಯರ್ತಡ್ಕ ಅಣಿಯೂರು, ಕಕ್ಕಿಂಜೆ ನರಸಿಂಹರಾಜಪುರ, ಜಡ್ಕಲ್ಹೊಸ್ಮಾರು, ಬೆಳಾಲು, ಪಡಂಗಡಿ, ಕೊಕ್ಕಡ ಅಜೆಕಾರು, ಸಿದ್ಧಕಟ್ಟೆ ಅಳದಂಗಡಿ ಸೇರಿದಂತೆ ಒಟ್ಟು ಖರೀದಿ ಶಾಖೆಗಳನ್ನು ಹೊಂದಿದೆ. ಸಂಘವು ಒಟ್ಟು 3955 ಸದಸ್ಯರನ್ನು ಹೊಂದಿದ್ದು, ರೂ. 252.35 ಕೋಟಿ ವ್ಯವಹಾರ ನಡೆಸಿದೆ, 16,600 ಟನ್ ಮಾರಾಟ ವ್ಯವಹಾರ ಮಾಡಲಾಗಿದೆ ಎಂದು ತಿಳಿಸಿದರು.

ಸಂಸ್ಕರಣ ಘಟಕದಲ್ಲಿ ರೂ.1.19 ಕೋಟಿ ವ್ಯವಹಾರ: ಸಂಘದಿಂದ ನಡೆಸಲ್ಪಡುವ ಉತ್ಪಾದನಾ ಘಟಕದಲ್ಲಿ ವಾಹನದ ಬಿಡಿ ಭಾಗ, ದ್ವಿಚಕ್ರ ವಾಹನಗಳ ಭೂಟ್‌ಮ್ಯಾಟ್, ಪಂಪ್‌ಸೆಟ್ ಬಿಡಿ ಭಾಗ, ಕೈಗಾರಿಕಾ ವಸ್ತುಗಳು, ಮಡ್‌ಗಾರ್ಡ್ ಪ್ಲಾಪ್, ಟಯರ್ ಪ್ಲಾಪ್ ಅಲ್ಲದೆ ಕೆಲವು ಕೈಗಾರಿಕೆಗೆ ಬೇಕಾದ ರಬ್ಬರು ಬಿಡಿಭಾಗಗಳ ಉತ್ಪಾದನೆಯೊಂದಿಗೆ ವರದಿ ಸಾಲಿನಲ್ಲಿ ಒಟ್ಟು ರೂ.1.19 ಕೋಟಿ ಮಾರಾಟ ಸಾಧಿಸಲಾಗಿದೆ. ವರದಿ ಸಾಲಿನಲ್ಲಿ ಮುಖ್ಯವಾಗಿ ವಿಎಸ್‌ಟಿ ಟಿಲ್ಲರ್‌ನ ಬಿಡಿಭಾಗ ಮತ್ತು ಕೇಜ್ ಮ್ಯಾಟ್ (ಕೋಳಿಫಾರಂಗಳಲ್ಲಿ ಬಳಸುವ ಮ್ಯಾಟ್) ಉತ್ಪಾದನೆ ಮಾಡಿರುತ್ತಿದ್ದು ಉತ್ತಮ ಬೇಡಿಕೆ ಇದೆ. ವರದಿ ಸಾಲಿನಲ್ಲಿ ಕಾರ್ಖಾನೆಯ ಸಾಮರ್ಥ್ಯದ ಶೇ.94ರಷ್ಟು ಉತ್ಪಾದನೆ ಮಾಡಲಾಗಿದೆ ಎಂದು ವಿವರಿಸಿದರು.

ರಬ್ಬರು ನರ್ಸರಿ: ಸಂಘದಿಂದ ನಡೆಸಲ್ಪಡುವ ರಬ್ಬರು ನರ್ಸರಿಯು ಉಜಿರೆಯಿಂದ 4 ಕಿ.ಮಿ ದೂರದಲ್ಲಿ ಕನ್ಯಾಡಿ ಗ್ರಾಮದ ಗುರಿಪಳ್ಳದಲ್ಲಿ ಸಂಘವು ಸ್ವಂತ ಜಾಗ ಖರೀದಿಸಿ ನರ್ಸರಿ ಸ್ಥಾಪಿಸಿದ್ದು ವರದಿ ಸಾಲಿನಲ್ಲಿ ಒಟ್ಟು 6898 ತೊಟ್ಟೆ ಗಿಡಗಳನ್ನು ಮಾರಾಟ ಮಾಡಲಾಗಿದ್ದು, ರಬ್ಬರು ಧಾರಣೆಯು ಕಡಿಮೆ ಇರುವುದರಿಂದ ಬೆಳೆಗಾರರು ಹೊಸದಾಗಿ ರಬ್ಬರು ಕೃಷಿಗೆ ಆಸಕ್ತಿ ತೋರಿಸದಿರುವ ಕಾರಣ ನರ್ಸರಿ ನಷ್ಟದಲ್ಲಿರುತ್ತದೆ ಎಂದರು.

ರಬ್ಬರ್ ಹಾಲು ಖರೀದಿ:ಸದಸ್ಯರ ಬಹುದಿನದ ಬೇಡಿಕೆಯಾಗಿದ್ದ ರಬ್ಬರು ಹಾಲು ಖರೀದಿಯನ್ನು ಪ್ರಾರಂಭಿಸಿರುತ್ತಿದ್ದು ವರದಿ ಸಾಲಿನಲ್ಲಿ ಒಟ್ಟು ರೂ.2.36 ಕೋಟಿ ಮೌಲ್ಯದ ಲ್ಯಾಟೆಕ್ಸ್ ಮಾರಾಟ ಮಾಡಲಾಗಿದೆ ಎಂದರು.ಸೊಸೈಟಿ ವಿಶೇಷ ಸಾಧನೆಗಳು: ಸಂಘವು ಸದಸ್ಯರ ಉತ್ಪನ್ನಗಳಿಗೆ ಅತ್ಯಧಿಕ ಧಾರಣೆ ದೊರೆಯಲು ಅನುಕೂಲವಾಗುವಂತೆ ಸದಸ್ಯರನ್ನು ಅಂತಾರಾಷ್ಟ್ರೀಯವಾಗಿ ಅತ್ಯುತ್ತಮ ದರ್ಜೆಯ ರಬ್ಬರಾದ RSS-IX ರಬ್ಬರ್ ತಯಾರಿಸಲು ಪ್ರೋತ್ಸಾಹಿಸಿ ಮಾರುಕಟ್ಟೆ ಒದಗಿಸಲಾಗಿದೆ. ವರದಿ ಸಾಲಿನಲ್ಲಿ ಒಟ್ಟು 259 ಟನ್ RSS-IX ರಬ್ಬರ್ ಉತ್ಪಾದನೆಯಾಗಿದೆ. ಈ ದರ್ಜೆಯ ರಬ್ಬರಿಗೆ RSS 4ನ ಧಾರಣೆಗಿಂತ ಕನಿಷ್ಟ ರೂ.10 ರಿಂದ ರೂ.25 ರವರೆಗೆ ಅಧಿಕ ಧಾರಣೆಯು ಬೆಳೆಗಾರರಿಗೆ ದೊರಕಿರುತ್ತದೆ.ಸಂಘದ ವ್ಯವಹಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಂಘದ ಸದಸ್ಯರು ಬೆಳೆಸಿದ ಕಾಳುಮೆಣಸು ಖರೀದಿ ವ್ಯವಹಾರವನ್ನು ಪ್ರಾರಂಭಿಸಲಾಗಿರುತ್ತದೆ. ವರದಿ ಸಾಲಿನಲ್ಲಿ ಒಟ್ಟು 35.34ಲಕ್ಷ ಮೌಲ್ಯದ 6421.800ಕೆಜಿ ಕಾಳುಮೆಣಸು ಖರೀದಿ ಮಾಡಲಾಗಿದೆ. ಸದಸ್ಯರ ಉತ್ಪನ್ನಕ್ಕೆ ಅಧಿಕ ಧಾರಣೆ ದೊರೆಯಲು ಅನುಕೂಲವಾಗುವಂತೆ ರಬ್ಬರನ್ನು ಸಂಘದಲ್ಲಿ ದಾಸ್ತಾನು ಇಡುವ ಸೌಲಭ್ಯ ನೀಡುತ್ತಿದ್ದು, ವರದಿ ಸಾಲಿನಲ್ಲಿ ಸುಮಾರು 1100ಟನ್ ರಬ್ಬರ್ ಸಂಘದಲ್ಲಿ ದಾಸ್ತಾನು ಇಡಲಾಗಿದ್ದು ಸುಮಾರು 250ಕ್ಕೂ ಮೇಲ್ಪಟ್ಟು ಸದಸ್ಯರು ಇದರ ಪ್ರಯೋಜನ ಪಡಕೊಂಡಿರುತ್ತಾರೆ. ಬೆಳೆಗಾರರಿಗೆ ಸ್ಪರ್ಧಾತ್ಮಕ ದರದಲ್ಲಿ ಕೃಪ್ತ ಸಮಯದಲ್ಲಿ ರಸಗೊಬ್ಬರ ಒದಗಿಸಲು ಕ್ರಮ ಕೈಗೊಂಡು ವರದಿ ಸಾಲಿನಲ್ಲಿ 582ಟನ್ ರಸಗೊಬ್ಬರ ಮಾರಾಟ ಮಾಡಲಾಗಿದೆ.

ಜಿಲ್ಲೆಯ ವಿವಿಧ ರಬ್ಬರು ವ್ಯವಹಾರ ನಡೆಸುವ ಇತರ ಸಂಸ್ಥೆಗಳಿಗೂ ಮಾರುಕಟ್ಟೆ ಒದಗಿಸುವಲ್ಲಿ ಸಂಘದ ವತಿಯಿಂದ ಸಹಕರಿಸಲಾಗಿದೆ. ನೈಜ ರಬ್ಬರನ್ನು ಮುಖ್ಯವಾಗಿ ರಾಷ್ಟ್ರದ ಪ್ರತಿಷ್ಠಿತ ಟಯರ್ ಕಂಪೆನಿಗಳಾದ MRF ಮತ್ತು Apollo ಅಲ್ಲದೆ ದೇಶದ ಮೂಲೆ ಮೂಲೆಯ ಸುಮಾರು 150ಕ್ಕೂ ಮೇಲ್ಪಟ್ಟು ಉತ್ಪಾದಕ ಕಂಪನಿಗಳೊಂದಿಗೆ ವ್ಯವಹರಿಸಲಾಗಿದ್ದು ಕೃಷಿಕರ ಉತ್ಪನ್ನಗಳನ್ನು ಉತ್ಪಾದಕರಿಗೆ ನೇರವಾಗಿ ಮಾರಾಟ ಮಾಡುವ ಮೂಲಕ ಬೆಳೆಗಾರರಿಗೆ ಗರಿಷ್ಠ ಧಾರಣೆ ಸಿಗುವಂತೆ ಪ್ರಯತ್ನಿಸುತ್ತಿದ್ದೇವೆ. ಸಂಸ್ಕರಣ ಘಟಕದ ಆವರಣದಲ್ಲಿ ವೇಬ್ರಿಡ್ಜ್ ನಿರ್ಮಿಸಲಾಗಿದ್ದು ಇದರ ಉಪಯೋಗವನ್ನು ಸಾರ್ವಜನಿಕರು ಪಡಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಸಂಘದ ಮುಂದಿನ ಯೋಜನೆಗಳು: ಸಂಘವು ನಡೆಸುತ್ತಿರುವ ಎಲ್ಲಾ ಖರೀದಿ ಕೇಂದ್ರಗಳನ್ನು ಕಂಪ್ಯೂಟರೀಕರಣಗೊಳಿಸಿ ಆನ್‌ಲೈನ್ ಮಾಡುವುದು. ಸಂಘದ ವ್ಯವಹಾರ ವಿಸ್ತರಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಹಾಗೂ ತಾಲೂಕಿನ ಹೊರಗಡೆ ಅಗತ್ಯವಿದ್ದಲ್ಲಿ ಸೇವಾ ಕೇಂದ್ರ ತೆರೆಯುವುದು.ಸಂಘದ ಶಾಖೆಗಳಿಗೆ ಸ್ವಂತ ನಿವೇಶನ ಖರೀದಿಸಿ ಸ್ವಂತ ಕಟ್ಟಡ ರಚನೆ ಮಾಡುವುದು ಎಂದು ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಆನಂತಭಟ್ ಮಚ್ಚಿಮಲೆ, ನಿರ್ದೇಶಕರುಗಳಾದ ಜಯಶ್ರೀ ಡಿ.ಎಂ, ಆರ್. ಸುಭಾಷಿಣಿ, ಬೈರಪ್ಪ, ಕೆ.ರಾಮ ನಾಯ್ಕ, ಸುಂದರ ಗೌಡ ಇಚ್ಚಿಲ, ಹೆಚ್. ಪದ್ಮಗೌಡ, ಕೆ.ಜೆ ಅಗಸ್ಟೀನ್, ವಿ.ವಿ ಅಬ್ರಾಹಂ, ಬಾಲಕೃಷ್ಣ ಗೌಡ ಕೆ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜು ಶೆಟ್ಟಿ ಉಪಸ್ಥಿತರಿದ್ದರು.

Related posts

ಹಳ್ಳಿಂಗೇರಿ ಹಾ.ಉ. ಮಹಿಳಾ ಸಹಕಾರ ಸಂಘದ ಕಟ್ಟಡ ರಚನಾ ಸಮಿತಿ ರಚನೆ

Suddi Udaya

ವಾಣಿ ಕಾಲೇಜಿನಲ್ಲಿ ಆಟಿ ಒಂಜಿ ನೆಂಪು -ಉಪನ್ಯಾಸ ಕಾರ್ಯಕ್ರಮ

Suddi Udaya

ಬಳಂಜ ಶ್ರೀ ಪಂಚಲಿಂಗೇಶ್ವರ ದೇವರಿಗೆ ಪಲ್ಲಕ್ಕಿ ಸಮರ್ಪಣೆ

Suddi Udaya

ನಡ ನೆಲ್ಲಿಗುಡ್ಡೆ ಅನಾರೋಗ್ಯದಿಂದ ಬಳಲುತ್ತಿರುವ ಶೀನಪ್ಪ ಗೌಡ ಕುಟುಂಬದ ಜೊತೆಗೆ ಹುಟ್ಟುಹಬ್ಬ ಆಚರಿಸಿ ತಾಲೂಕಿಗೆ ಮಾದರಿಯಾದ ನಡ ಪ.ಪೂ. ಕಾಲೇಜು ವಿದ್ಯಾರ್ಥಿ: ಅಕ್ಕಿ, ದವಸಧಾನ್ಯ ವಿತರಣೆ

Suddi Udaya

ಉಜಿರೆ: ಶ್ರೀ ಧ.ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘ ಮತ್ತು ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಸಿಪಿ ಆರ್ ಮಾಹಿತಿ ಮತ್ತು ತರಬೇತಿ ಕಾರ‍್ಯಕ್ರಮ

Suddi Udaya
error: Content is protected !!