ಬೆಳ್ತಂಗಡಿ: ಸಾಮಾಜಿಕ ಪಿಡುಗಾದ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ವಿದ್ಯಾರ್ಥಿಗಳು ಮಹತ್ವದ ಪಾತ್ರ ವಹಿಸಬೇಕು ಎಂದು ಬೆಳ್ತಂಗಡಿ ಜೆ. ಎಂ. ಎಫ್ .ಸಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯೇಂದ್ರ ಟಿ. ಹೆಚ್ ಹೇಳಿದರು.
ಅವರು ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿ ವಕೀಲರ ಸಂಘ( ರಿ) ಹಾಗೂ ವಾಣಿ ಪದವಿ ಪೂರ್ವ ಕಾಲೇಜಿನ ಕಾನೂನು ಸಾಕ್ಷರತಾ ಸಂಘದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂದು ಭ್ರಷ್ಟಾಚಾರ ಸರ್ವ ವ್ಯಾಪ್ತಿಯಲ್ಲೂ ಕಂಡುಬರುತ್ತಿದೆ. ಯಾರೂ ಕೂಡ ಲಂಚ ತೆಗೆದುಕೊಳ್ಳುವುದಿಲ್ಲ ಮತ್ತು ಕೊಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರ ಸಹಾಯವನ್ನು ಪಡೆಯಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಬೆಳ್ತಂಗಡಿಯ ವಕೀಲರಾದ ಪ್ರಶಾಂತ್ .ಎಂ ಮಾತನಾಡಿ, ಸಮಾಜದ ಸಾಮಾನ್ಯ ಜನತೆಗೂ ಕೂಡ ಕಾನೂನಿನ ಅರಿವು ಮತ್ತು ನೆರವು ಸಿಗಬೇಕು. ಲೋಕ ಅದಾಲತ್, ಜನತಾ ನ್ಯಾಯಾಲಯ ಇವುಗಳ ಮೂಲಕ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಬಡವರು ಮಹಿಳೆಯರು ಮತ್ತು ಮಕ್ಕಳು ಉಚಿತ ಕಾನೂನು ನೆರವನ್ನು ಪಡೆಯಬಹುದು ಎಂದರು.
ಕಾಲೇಜಿನ ಉಪ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ ಅಧ್ಯಕ್ಷತೆ ವಹಿಸಿದ್ದರು. ಕಾನೂನು ಸಾಕ್ಷರತಾ ಸಂಘದ ಸಂಯೋಜಕರಾದ ಶ್ರೀಮತಿ ಮೀನಾಕ್ಷಿ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ಅನುರಾಧ ಕೆ ರಾವ್ ಧನ್ಯವಾದವಿಕ್ತರು.