September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಕುಸಿಯುವ ಮೊದಲು ಹೊಸ ಸೇತುವೆ ನಿರ್ಮಾಣವಾಗುವುದೇ…? ಚುನಾವಣೆ ಬಹಿಷ್ಕಾರ ಹಾಕಿದರೂ ಕ್ಯಾರೇ ಅನ್ನದ ಅಧಿಕಾರಿಗಳು…!!!

ಬೆಳ್ತಂಗಡಿ: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಸ್ತೆ , ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಚುನಾವಣಾ ಬಹಿಷ್ಕಾರ ಹಾಕಿದಾಗ ಮತದಾರರ ಕೈಕಾಲು ಹಿಡಿದ ಅಧಿಕಾರಿಗಳು ಮತ್ತೆ ಆ ಕಡೆ ತಲೆ ಎತ್ತಿ ನೋಡಿಲ್ಲ. ರಸ್ತೆ , ಸೇತುವೆ ನಿರ್ಮಾಣದ ಕನಸು ಇನ್ನೂ ಕನಸಾಗಿಯೇ ಇದೆ‌. ಇದೀಗ ಮತ್ತೊಮ್ಮೆ ಚುನಾವಣಾ ಬಹಿಷ್ಕಾರದ ಕೂಗು ಕೇಳಿಬರುತ್ತಿದೆ.

ಇದು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕೈಕಂಬ- ಅತ್ಯಡ್ಕ- ಬಳ್ಳಿತೋಟ- ಬೋಜಾರ ರಸ್ತೆ- ಸೇತುವೆಯ ಮುಗಿಯದ ಕಥೆ. ನಾವೂರು ಗ್ರಾಮದ ಕೈಕಂಬದಿಂದ ನಡ ಗ್ರಾಮದ ಬೋಜಾರ ಮೂಲಕ ಮುಡಾಯಿಬೆಟ್ಟು ಪ್ರದೇಶವನ್ನು ಸಂಪರ್ಕಿಸುವ ಈ ರಸ್ತೆ ಅಂದಾಜು 4 ಕಿಮೀ ದೂರವಿದೆ. ಈ ರಸ್ತೆ ಡಾಮರು ಕಾಣದೆ ಸರಿಸುಮಾರು 30 ವರ್ಷಗಳೇ ಕಳೆದಿದೆ. ಇದೀಗ ಅಲ್ಲೊಂದು ಇಲ್ಲೊಂದು ಡಾಮರೀಕರಣದ ಅವಶೇಷಗಳು ಮಾತ್ರ ಡಾಮರು ರಸ್ತೆ ಎಂಬುದಕ್ಕೆ ಸಾಕ್ಷಿಯಾಗಿ ಕಾಣಸಿಗುತ್ತವೆ. ಜಲ್ಲಿಕಲ್ಲುಗಳು ರಸ್ತೆಯನ್ನು ಬಿಟ್ಟು ಬದಿಗೆ ಸರಿದಿದೆ. ಅಂತೂ ಸದ್ಯ ರಸ್ತೆಯ ಅಸ್ಥಿಪಂಜರ ಮಾತ್ರವಿದೆ.

ಸೇತುವೆ ಕುಸಿಯುವ ಹಂತದಲ್ಲಿ: ಈ ರಸ್ತೆಯ ಸಂಪರ್ಕಕ್ಕಾಗಿ ಕೈಕಂಬ ಎಂಬಲ್ಲಿರುವ ಸೇತುವೆ ಇಂದೋ , ನಾಳೆಯೋ ಕುಸಿದರೆ ಯಾವುದೇ ಆಶ್ಚರ್ಯವಿಲ್ಲ. ಸೇತುವೆಯ ಅಡಿಭಾಗದಲ್ಲಿ ಸಿಮೆಂಟ್ ಇಲ್ಲದೆ ಕಬ್ಬಿಣಗಳು ಕಾಣುತ್ತದೆ , ಅಡಿಪಾಯವೂ ಅಪಾಯಕಾರಿಯಾಗಿದೆ. 2019 ರ ಭೀಕರ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸೇತುವೆಯ ನಡುವಿನ ತಡೆಗೋಡೆ ಕೊಚ್ಚಿ ಹೋಗಿ ಜೀವ ಬಲಿಗಾಗಿ ಕಾಯುತ್ತಿದೆ. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಅಪಾಯಕಾರಿ ಸೇತುವೆಯಲ್ಲಿ ಘನ ವಾಹನಗಳ ಸಂಚಾರ ನಿಷೇಧಿಸಿ ಸ್ಥಳೀಯ ನಾವೂರು ಗ್ರಾಮ ಪಂಚಾಯತ್ ಬ್ಯಾನರ್ ಅಳವಡಿಸಿದೆ. ಆದರೂ ಅಪಾಯಕಾರಿ ಸೇತುವೆಯ ಬಗ್ಗೆ ಇನ್ನೂ ಗಮನ ಹರಿಸದಿರುವುದು ಜನರ ಜೀವ ಬಲಿಗಾಗಿ ಅಧಿಕಾರಿಗಳು ಕಾಯುತ್ತಿದ್ದರೆಯೇ ಎಂಬ ಅನುಮಾನವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.ಜನರ ದಿನನಿತ್ಯದ ಬದುಕಿನಲ್ಲಿ ಬಹುಮುಖ್ಯವಾಗಿರುವ ಈ ಏಕೈಕ ಸೇತುವೆ ಮತ್ತು ರಸ್ತೆಯನ್ನು ದಿನನಿತ್ಯ 300 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಜನರು ಉಪಯೋಗಿಸುತ್ತಿದ್ದಾರೆ. ಪ್ರಸ್ತುತ ಈ ರಸ್ತೆ ಜನ , ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದು , ಕನಿಷ್ಟ ಪಕ್ಷ ಸೇತುವೆ ಕುಸಿಯುವ ಮುನ್ನ ಹೊಸ ಸೇತುವೆ ನಿರ್ಮಾಣ ಕಾರ್ಯ ನಡೆಯುವುದೇ ಎಂದು ಕಾದು ನೋಡಬೇಕಾಗಿದೆ.

ಮತ್ತೊಮ್ಮೆ ಚುನಾವಣಾ ಬಹಿಷ್ಕಾರದ ಕೂಗು… ಕೇಳುವ ಮುನ್ನ… ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಭಾಗದ ಜನರು ಸಾಮೂಹಿಕ ಚುನಾವಣಾ ಬಹಿಷ್ಕಾರ ಹಾಕಿ ಬ್ಯಾನರ್ ಅಳವಡಿಸಿ ಈ ಮೂಲಕ ಆಳುವ ವರ್ಗಕ್ಕೆ ಬಿಸಿ ಮುಟ್ಟಿಸಿದ್ದರು. ಆ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ , ತಾಲೂಕು ಪಂಚಾಯತ್ , ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಅಧಿಕಾರಿಗಳು ಸೇರಿದಂತೆ ಚುನಾವಣಾಧಿಕಾರಿಗಳು ಆಗಮಿಸಿ , ರಾಜಕಾರಣಿಗಳಂತೆ ಬರವಸೆ ನೀಡಿ ವಾಪಸ್ ಹೋದವರು ಮತ್ತೆ ಆ ಕಡೆಗೆ ಗಮನ ಹರಿಸಿಲ್ಲ. ಇದೀಗ ಮತ್ತೆ ಗ್ರಾಮ , ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗಳು ಸಾಲು ಸಾಲಾಗಿ ಬರಲಿದ್ದು , ಆಗ ಮತ್ತೊಮ್ಮೆ ಯಾವುದೇ ಕಾರಣಕ್ಕೂ ಜಗ್ಗದ , ಬಗ್ಗದ ರೀತಿಯಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಈಗಾಗಲೇ ತಯಾರಿ ನಡೆಸಲಾಗಿದೆ . ಅದಕ್ಕಿಂತಲೂ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮತ್ತೊಮ್ಮೆ ಮಂಗಳಾರತಿ ಗ್ಯಾರಂಟಿ ಎಂದು ಸಾರ್ವಜನಿಕರು ಆಕ್ರೋಶದಿಂದ ನುಡಿಯುತ್ತಾರೆ.

Related posts

ನಾರಾವಿ ಮತ್ತು ಕುತ್ಲೂರು ಬಿಜೆಪಿ ಶಕ್ತಿಕೇಂದ್ರದ ಅಭ್ಯಾಸವರ್ಗ ಕಾರ್ಯಕ್ರಮ

Suddi Udaya

ಸೋಣಂದೂರು: ಸಬರಬೈಲು ಕುವ್ವತುಲ್ ಇಸ್ಲಾಮ್ ಯುವಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಪ್ರತಿಭಟನೆಗೆ ಸುಲ್ಕೇರಿಮೊಗ್ರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ನವೀನ್ ಕೆ. ಸಾಮಾನಿ ಬೆಂಬಲ

Suddi Udaya

ಗೇರುಕಟ್ಟೆ ಮೆದಿನದಲ್ಲಿ ‘ಸುಧನ್ವ ಮೋಕ್ಷ’ ತಾಳಮದ್ದಳೆ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ಒಂಟಿ ಸಲಗ ಪ್ರತ್ಯಕ್ಷ

Suddi Udaya

ಬೊಳ್ಳುಕಲ್ ಹನುಮಾನ್ ನಗರ ಶ್ರೀದುರ್ಗಾ ಭಜನಾ ಮಂಡಳಿ ವತಿಯಿಂದ ಡಾಕಯ್ಯ ಗೌಡರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!