36.1 C
ಪುತ್ತೂರು, ಬೆಳ್ತಂಗಡಿ
March 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಮಸ್ಯೆ

ಶೇ.100 ಮತದಾನವಾದರೂ ಅಭಿವೃದ್ಧಿ ಹೊಂದದ ಬಾಂಜಾರು ಮಲೆ… ಮಾತು ತಪ್ಪಿದ ಅಧಿಕಾರಿಗಳು…???

ದ.ಕ ಜಿಲ್ಲೆಯ ಹೆಬ್ಬಾಗಿಲು ಎಂದೇ ಕರೆಯಲಾಗುವ ಬಾಂಜಾರು ಮಲೆಕುಡಿಯ ಕಾಲೋನಿ ಇನ್ನೂ ಅಭಿವೃದ್ಧಿ ವಂಚಿತಗೊಂಡಿದೆ. ಆದರೂ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲು ಇಲ್ಲಿ ಚುನಾವಣೆಯಲ್ಲಿ 100% ಮತದಾನ ಗ್ಯಾರಂಟಿ. ಇಲ್ಲಿ ಇಲ್ಲಗಳೇ ಸಾಮ್ರಾಜ್ಯವಾಗಿ ಬೆಳೆಯುತ್ತಿದೆ ಇದು ಮಾತ್ರ ವ್ಯವಸ್ಥೆಯ ದುರಂತ.

ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 45 ಕಿಮೀ ದೂರದಲ್ಲಿರುವ , ದ.ಕ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದ ದಟ್ಟ ಅರಣ್ಯದ ನಡುವೆ ಕಂಗೊಳಿಸುವ ಪ್ರಕೃತಿ ಸೌಂದರ್ಯದ ನಡುವೆ ಬಾಂಜಾರು ಮಲೆಕುಡಿಯ ಕಾಲೋನಿ ಇದೆ. ಇಲ್ಲಿ ಜಿಲ್ಲಾಧಿಕಾರಿಗಳ ಗೌರವದ ದ್ಯೋತಕವಾಗಿ ಡಿಸಿ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. 1982 ರಲ್ಲಿ ನಿರ್ಮಾಣವಾದ ಡಿಸಿ ಕಟ್ಟೆಯನ್ನು 2016 ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಎ.ಬಿ ಇಬ್ರಾಹಿಂ ರವರು ಇಲ್ಲಿಗೆ ಇತಿಹಾಸದಲ್ಲಿ ಮೊದಲ ಬಾರಿಗೆ ಭೇಟಿ ನೀಡಿ ಉದ್ಘಾಟಿಸಿದರು. ಆ ಬಳಿಕ 4.50 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ , ಮೋರಿ ಮೊದಲಾದ ಅಭಿವೃದ್ಧಿ ಕಾರ್ಯ ನಡೆಯಿತು. ಇಲ್ಲಿಯೇ ಹೊಸ ಚುನಾವಣಾ ಬೂತ್ ಸ್ಥಾಪಿಸಲಾಯಿತು. ಬಳಿಕ ಮತ್ತೆ ಅಭಿವೃದ್ಧಿ ಕುಂಠಿತಗೊಂಡಿತು. ನಂತರ ಸಸಿಕಾಂತ್ ಸೆಂಥಿಲ್ ರವರು ಜಿಲ್ಲಾಧಿಕಾರಿಯಾದಗ ಇಲ್ಲಿನ 48 ಮಲೆಕುಡಿಯ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವಾಯಿತು. ಹೊಸ ರಸ್ತೆ ನಿರ್ಮಾಣಕ್ಕೆ ಕಂದಾಯ, ಅರಣ್ಯ ಇಲಾಖೆಯ ಜಂಟಿ ಸರ್ವೆ ಕಾರ್ಯ ನಡೆಯಿತು. ಇಷ್ಟು ಬಿಟ್ಟರೆ ಯಾವುದೇ ಅಭಿವೃದ್ಧಿ ಕಾಣದ ಊರಗಿ ಬಾಂಜಾರು ಮಲೆ ಉಳಿದಿದೆ.

ಮೊಬೈಲ್ ಸಂಪರ್ಕವಿಲ್ಲದ ಊರು: ಇಲ್ಲಿ ಯಾವುದೇ ತುರ್ತು ಪರಿಸ್ಥಿತಿಯಲ್ಲಿಯೂ ಮೊಬೈಲ್ ಸಂಪರ್ಕ ಸಿಗಲ್ಲ. ಇಲ್ಲಿ ಸುಮಾರು 200 ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ 30 ಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿಧ್ಯಾರ್ಥಿಗಳಿದ್ದಾರೆ. ಇವರಿಗೆ ಆನ್‌ಲೈನ್ ತರಗತಿ , ಸೇರಿದಂತೆ ಇತರ ಯಾವುದೇ ಸೌಲಭ್ಯಗಳು ದೊರೆಯುವುದಿಲ್ಲ. ಮೊಬೈಲ್ ನೆಟ್‌ವರ್ಕ್ ಗಾಗಿ 18 ಕಿಮೀ ದೂರದಲ್ಲಿರುವ ಚಾರ್ಮಾಡಿಗೆ ಬರಬೇಕು…!!! ಒಂದು ಮೊಬೈಲ್ ಕರೆ ಅಥವಾ ಮೊಬೈಲ್ ಸಂಬಂಧಿಸಿದ ಕೆಲಸಕ್ಕಾಗಿ 1000 ರೂಪಾಯಿ ಬಾಡಿಗೆ ವಾಹನಕ್ಕೆ ಕೊಡಬೇಕು…!!! ಇಂತಹ ದುರಂತ ಪರಿಸ್ಥಿತಿಯನ್ನು ತಪ್ಪಿಸಲು ಸೂಕ್ತ ವ್ಯವಸ್ಥೆ ಆಗಬೇಕಾಗಿದೆ. ಪ್ರತಿ ತಿಂಗಳು ಸಂಚಾರಿ ಪಡಿತರ ವ್ಯವಸ್ಥೆ ಮೂಲಕ ಜನರಿಗೆ ಪಡಿತರ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತದೆ. ಈ ಪಡಿತರ ಸಾಮಗ್ರಿಗಳನ್ನು ಪಡೆಯಲು ನೆಟ್‌ವರ್ಕ್ ಗಾಗಿ ಮರಗಳನ್ನು ಏರಲೇಬೇಕು…!!! ಮರ ಮತ್ತು ಎತ್ತರದ ಬಂಡೆಕಲ್ಲು ಏರದಿದ್ದರೆ ಆ ತಿಂಗಳಲ್ಲಿ ಪಡಿತರ ಸಾಮಾಗ್ರಿಗಳು ಗೋವಿಂದ…!!!

ಸಂಪರ್ಕ ರಸ್ತೆ ಮತ್ತು ಸೇತುವೆ: ಬಾಂಜಾರು ಮಲೆಕುಡಿಯ ಕಾಲೋನಿಗೆ ಚಾರ್ಮಾಡಿ ಘಾಟಿಯ 9 ತಿರುವುನಿಂದ 9 ಕಿಮೀ ದೂರ ಅರಣ್ಯ ಮತ್ತು ಖಾಸಗಿ ಜಮೀನಿನ ಮೂಲಕ ತೆರಳಬೇಕು. ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಅರಣ್ಯ/ ಖಾಸಗಿ ಜಮೀನ್ದಾರರ ವಿರೋಧವಿದೆ. ಮಳೆಗಾಲದಲ್ಲಿ ಚಾರ್ಮಾಡಿ ಘಾಟಿಯಲ್ಲಿ ಕುಸಿತಗೊಂಡರೆ ಈ ಭಾಗದ ಜನರಿಗೆ ತಾತ್ಕಾಲಿಕ ದಿಗ್ಬಂಧನ ಗ್ಯಾರಂಟಿ. ಇಲ್ಲಿಗೆ ಪರ್ಯಾಯ ರಸ್ತೆಯ ಅಗತ್ಯತೆಯನ್ನು ಮನಗಂಡು ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ರವರು ನೆರಿಯ ಗ್ರಾಮದ ಅಣಿಯೂರು- ಕಾಟಾಜೆ- ಪರ್ಪಲ ಮೂಲಕ ಬಾಂಜಾರು ಮಲೆಕುಡಿಯ ಕಾಲೋನಿಗೆ ರಸ್ತೆ ಸಂಪರ್ಕಕ್ಕೆ ಸರ್ವೆ ಕಾರ್ಯ ನಡೆಸಿದರು. ಸರ್ವೆ ಕಾರ್ಯ ಮುಗಿಯುವ ವೇಳೆಗೆ ಅವರು ಸೇವೆಗೆ ನಿವೃತ್ತಿ ಘೋಷಿಸಿದರು. ನಂತರ ಬಂದ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿಲ್ಲ ಎಂಬುದು ಇಲ್ಲಿನ ಜನರು ಬೇಸರ ವ್ಯಕ್ತಪಡಿಸುತ್ತಾರೆ. ಬಾಂಜಾರು ಕಾಲನಿಯಲ್ಲಿ 2-3 ಕಡೆಗಳಲ್ಲಿ ಕಾಡಿನ ನದಿಗಳು ಹರಿಯುತ್ತವೆ. ಮಳೆಗಾಲದಲ್ಲಂತೂ ಈ ನದಿಗಳು ಉಕ್ಕಿ ಹರಿದು ತೋಟಗಳು ಮುಳುಗಿ ಮನೆಯಂಗಳದ ತನಕವೂ ನೀರು ಹರಿಯುತ್ತದೆ. ಈ ನದಿಗಳನ್ನು ದಾಟಲು ಸರ್ವಋತು ಸೇತುವೆಗಳು ನಿರ್ಮಾಣವಾಗಬೇಕಾಗಿದೆ. ಇಲ್ಲಿ ಪ್ರಸ್ತುತ ಅಡಿಕೆ ಮರದ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುತ್ತಿದ್ದರೂ ವರ್ಷಕ್ಕೆ 8-10 ಬಾರಿ ಹೊಸದಾಗಿ ನಿರ್ಮಿಸಬೇಕಾಗಿದೆ‌. ಏಕೆಂದರೆ ನೀರು ಉಕ್ಕಿ ಹರಿಯುವಾಗ ತಾತ್ಕಾಲಿಕ ಅಡಿಕೆ ಮರದ ಸೇತುವೆ ನೀರುಪಾಲು…!!!

ಸುಸಜ್ಜಿತ ಅಂಗನವಾಡಿ ಮತ್ತು ಸಮುದಾಯ ಭವನ : ಇಲ್ಲಿ 50 ಜನರು ಕುಳಿತುಕೊಳ್ಳುವ ಸಾಮಾರ್ಥ್ಯದ ಸಮುದಾಯ ಭವನವಿದೆ. ಅದನ್ನು 250 ಜನ ಸಾಮಾರ್ಥ್ಯಕ್ಕೆ ಹೆಚ್ಚಿಸಿ , ಅಡುಗೆ ಕೋಣೆ , ಊಟದ ವ್ಯವಸ್ಥೆಗಾಗಿ ಸೀಟ್ ಅಳವಡಿಯಾದರೆ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ. ಇಲ್ಲಿನ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಅಂಗನವಾಡಿ ಕೇಂದ್ರಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಾಣವಾಗಬೇಕು ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ. ಅಂಗನವಾಡಿ ಕೇಂದ್ರಕ್ಕೆ ಈಗಾಗಲೇ ಜಮೀನು ಗುರುತಿಸಲಾಗಿದ್ದರೂ ಅಂಗನವಾಡಿ ಕಟ್ಟಡಕ್ಕೆ ಮಾತ್ರ ಕಾಲ ಕೂಡಿ ಬಂದಿಲ್ಲ.

” ನಮ್ಮಲ್ಲಿ 100% ಮತದಾನ ನಡೆದಾಗ ಅಭಿವೃದ್ಧಿ ಕೆಲಸಗಳು ನಡೆಯುತ್ತದೆ ಎಂಬ ಭರವಸೆ ಇತ್ತು. ಆದರೆ ಬರವಸೆ ಈಡೇರಿಸಬೇಕಾದ ಅಧಿಕಾರಿಗಳು , ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿದಿರುವುದು ದುರಂತ. ಅವರ ಅಗತ್ಯಗಳಿಗೆ ನಮ್ಮನ್ನು ಉಪಯೋಗಿಸಿ , ಮತ್ತೆ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡದೆ ವಂಚಿಸುತ್ತಿರುವುದು ಬೇಸರದ ಸಂಗತಿ. ಮಾಜಿ ಶಾಸಕ ದಿ. ವಸಂತ ಬಂಗೇರ ಹಾಗೂ ಎ.ಬಿ ಇಬ್ರಾಹಿಂ , ಸಸಿಕಾಂತ್ ಸೆಂಥಿಲ್ ರವರು ಜಿಲ್ಲಾಧಿಕಾರಿಗಳಾಗಿದ್ದ ಸಂದರ್ಭದಲ್ಲಿ ನಡೆದ ಅಭಿವೃದ್ಧಿಯ ನಂತರ ಅಭಿವೃದ್ಧಿ ಶೂನ್ಯವಾಗಿದೆ. ನಾವು ಸಂವಿಧಾನಬದ್ಧ ಮೂಲಭೂತ ಹಕ್ಕುಗಳನ್ನು ಕೇಳುತ್ತೇವೆಯೇ ಹೊರತು ಬೇರೆನೆನ್ನಲ್ಲ. ನಮ್ಮನ್ನು ನಾಗರಿಕ ಸಮಾಜವಾಗಿ ಗೌರವಿಸಬೇಕು ಎಂಬುದು ನಮ್ಮ ಬೇಡಿಕೆ “. ನಾಗೇಶ್ ಬಾಂಜಾರು ಮಲೆಕುಡಿಯ ಸಮುದಾಯದ ಹೋರಾಟಗಾರ

Related posts

ಬೆಳ್ತಂಗಡಿ ಕರ್ನಾಟಕ ಗಮಕ ಕಲಾ ಪರಿಷತ್, ವತಿಯಿಂದ ‘ಮನೆ ಮನೆ ಗಮಕ’ ವಿನೂತನ ಕಾರ್ಯಕ್ರಮ

Suddi Udaya

ಗುರುವಾಯನಕೆರೆ ಕೆರೆ ಬಳಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಲಾರಿ: ತಪ್ಪಿದ ಅನಾಹುತ

Suddi Udaya

ವೇಣೂರು : ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಹೆಲಿಕಾಪ್ಟರ್ ಮೂಲಕ ಪುಪ್ಷವ್ರಷ್ಟಿ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಎಚ್ ಐ ವಿ ಯ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಬೆಳಾಲು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಗ್ರಾಮ ಸಮಿತಿಯ ವಾರ್ಷಿಕ ಕ್ರೀಡಾಕೂಟ

Suddi Udaya

ಜಮೀಯತುಲ್ ಫಲಾಹ್ ಉಡುಪಿ- ದ.ಕ ಕೇಂದ್ರ ಸಮಿತಿ ಕಾರ್ಯದರ್ಶಿಯಾಗಿ ಅಬ್ಬೋನು ಮದ್ದಡ್ಕ ಆಯ್ಕೆ

Suddi Udaya
error: Content is protected !!