23.7 C
ಪುತ್ತೂರು, ಬೆಳ್ತಂಗಡಿ
July 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರ ಉಪ್ಪಿನಂಗಡಿಯ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣೆ

ಉಪ್ಪಿನಂಗಡಿ: ಇತಿಹಾಸವನ್ನು ಬಹಳ ಬೇಗ ಮರೆಯುವ ವ್ಯವಸ್ಥೆ ನಮ್ಮದು. ಐತಿಹಾಸಿಕವಾಗಿ ನಮ್ಮ ಮುಂದಿನ ತಲೆಮಾರಿಗೆ ಮಂಜ ಬೈದ್ಯರನ್ನು ನೆನಪು ಮಾಡಿಕೊಳ್ಳುವುದಕ್ಕೆ ಯೋಜನೆ ಹಾಗೂ ಯೋಚನೆಯನ್ನು ಈ ಸಂಸ್ಮರಣಾ ಸಮಿತಿ ಮಾಡುವುದಾದರೆ ನಾವೆಲ್ಲರೂ ಒಟ್ಟಾಗಿ ಬೆಂಬಲ ಕೊಡುವಂತಹದ್ದು ನಮ್ಮೆಲ್ಲರ ಕರ್ತವ್ಯ. ಸಂಸದ ಬ್ರಿಜೇಶ್ ಚೌಟ ಹಾಗೂ ನಾನು ಒಟ್ಟಾಗಿ ಮುಂದೆ ಆಗಬೇಕಾದ ಯೋಜನೆಗಳು ಕಾರ್ಯರೂಪಕ್ಕೆ ಬರಲು ಪ್ರಯತ್ನ ಮಾಡುತ್ತೇವೆ ಎಂದು ಉಡುಪಿ-ಚಿಕ್ಕಮಗಳೂರು ಜಿಲ್ಲಾ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ಅವರು ಮೇ27 ರಂದು ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ದ.ಕ.ಜಿಲ್ಲೆ ಮತ್ತು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಆಶ್ರಯದಲ್ಲಿ ಅಪ್ರತಿಮ ದೇಶ ಭಕ್ತ, ಅಗ್ರಗಣ್ಯ ಸ್ವಾತಂತ್ರö್ಯ ಹೋರಾಟಗಾರ,ಬ್ರಿಟಿಷರ ವಿರುದ್ಧ ದಂಗೆ ಎದ್ದು ಹುತಾತ್ಮರಾದ ಉಪ್ಪಿನಂಗಡಿಯ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಕಾರ್ಯಕ್ರಮದಲ್ಲಿ ಸಂಸ್ಮರಣಾ ನುಡಿಗಳನ್ನು ನುಡಿಯುತ್ತ ಮಾತನಾಡಿದರು.

ಈ ನೆಲದ ಮಣ್ಣು, ಗಾಳಿ, ನೀರು ಪ್ರತಿಯೊಂದರಲ್ಲೂ ದೇವರನ್ನು ಕಾಣುವ ಅದ್ಬುತವಾದ ದೇಶ ಭಾರತ. ಇತಿಹಾಸದಲ್ಲಿ ಸೇರಿ ಹೋದಂತಹ ಒಬ್ಬ ಸ್ವಾತಂತ್ರ್ಯ ಹೋರಾಟಗಾರನ್ನು ಎರಡು ಶತಮಾನಗಳ ನಂತರ ಅವನ ಹುಟ್ಟೂರಿನಲ್ಲಿ ನೆನಪು ಮಾಡುತ್ತೇವೆ ಎಂದರೆ ಅದುವೇ ಬದುಕಿನ ಸಾರ್ಥಕ ಕ್ಷಣ. ಸಮಿತಿಯ ಪ್ರತಿಯೊಂದು ಯೋಜನೆಗಳಿಗೂ ಸದಾ ಬೆಂಬಲವನ್ನು ನೀಡುತ್ತೇವೆ ಎಂದು ಅವರು ತಿಳಿಸಿದರು.

ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ, ನಮ್ಮ ಬದುಕಿಗೆ ಬೆಳಕನ್ನು ಕೊಟ್ಟಂತಹದ ಹಿರಿಯರನ್ನು ಸ್ಮರಿಸುವುದರ ಜೊತೆಗೆ ದೇಶದ ಸ್ವಾತಂತ್ರö್ಯಕ್ಕೋಸ್ಕರ ಪ್ರಾಣಾರ್ಪಣೆಯನ್ನು ಮಾಡಿದಂತಹ ವೀರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಪೂರ್ವಜರಿಗೆ, ನಮಗಾಗಿ ಬದುಕಿ ಬಾಳಿದವರಿಗೆ ಗೌರವ ಸಲ್ಲಿಸದಿದ್ದರೆ ಖಂಡಿತವಾಗಿಯೂ ಭವಿಷ್ಯ ಇರುವುದಿಲ್ಲ. ೧೮೩೭ರ ಇಸವಿಯಲ್ಲಿ ಬ್ರಿಟಿಷರ ವಿರುದ್ಧ ನಮ್ಮ ಊರಿನ ಒಬ್ಬ ಸೇನಾನಿ ಹೋರಾಟ ಮಾಡಿದ್ದಾರೆ ಎಂಬುವುದು ಗೌರವ ಹಾಗೂ ಹೆಮ್ಮೆಯ ಸಂಗತಿ ಎಂದು ಕ್ರಾಂತಿವೀರ ಮಂಜಬೈದ್ಯ ಸಂಸ್ಮರಣಾ ನುಡಿಯನ್ನು ನುಡಿದರು.
ಬಿಜೆಪಿ ದ.ಕ. ಜಿಲ್ಲಾ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಭಾರತದ ಪುಣ್ಯಭೂಮಿಗಾಗಿ ಹೋರಾಡಿದ ಅನೇಕ ವೀರರ ತ್ಯಾಗ ಬಲಿದಾನಗಳಿಂದಾಗಿ ಇಂದು ನಾವು ಅತ್ಯಂತ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಅವರೆಲ್ಲರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ ಸಮಿತಿ ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಕ್ರಾಂತಿವೀರ ಮಂಜು ಬೈದ್ಯರ ಹೆಸರು ಉಪ್ಪಿನಂಗಡಿಗೆ ಸೀಮಿತವಾಗದೆ ಇಡೀ ತುಳುನಾಡಿಗೆ ಪಸರಿಸುವಂತೆ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಕಲ್ಲೇರಿಯಲ್ಲಿ ವೃತ್ತ ನಿರ್ಮಾಣಕ್ಕೆ ನನ್ನ ಸಹಕಾರ: ಶಾಸಕ ಪೂಂಜ
ಇತಿಹಾಸವನ್ನು ನೆನಪು ಮಾಡುವಂತಹ ಜವಾಬ್ದಾರಿ ಸಮಾಜಕ್ಕೆ ಇದೆ. ಮಂಜ ಬೈದ್ಯರ ನೆನಪನ್ನು ಅಜರಾಮರವಾಗಿ ಇಡುವ ದೃಷ್ಠಿಯಿಂದ ಹಲವು ಬೇಡಿಕೆಗಳು ಸಮಿತಿ ಮುಂದಿಟ್ಟಿದ್ದು, ಕಲ್ಲೇರಿಯಲ್ಲಿ ವೃತ್ತ ಹಾಗೂ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಪೂರ್ಣ ಪ್ರಮಾಣದ ಸಹಕಾರವನ್ನು ನೀಡುತ್ತೇನೆ. ಜೊತೆಗೆ ಸಮಿತಿಯ ಸಲಹೆಯೊಂದಿಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಸರಕಾರಿ ಕಟ್ಟಡಕ್ಕೆ ಮಂಜ ಬೈದ್ಯರ ಹೆಸರು ಇಡುವಂತಹ ಪ್ರಕ್ರಿಯೆಗೆ ಸಹಕಾರ ನೀಡುತ್ತೇನೆ. ಮಂಜ ಬೈದ್ಯರು ಹುಟ್ಟಿ ಬೆಳೆದಂತಹ ಮೂಲ ಮನೆಯ ಪ್ರದೇಶದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಿದರೆ, ಅವರ ಹೆಸರು ಇತಿಹಾಸದಲ್ಲಿ ನೆನಪು ಉಳಿಯುವಂತಹ ಕಾರ್ಯವಾಗುತ್ತದೆ. ಸಮಿತಿ ಈ ದೃಷ್ಠಿಯಿಂದಲೂ ಯೋಚನೆ ಮಾಡಿ, ಸಂಪೂರ್ಣ ಸಹಕಾರವನ್ನು ನೀಡುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಇತಿಹಾಸ ತಿಳಿಸುವ ಐತಿಹಾಸಿಕ ಕಾರ್ಯ: ಸಂಪತ್ ಬಿ. ಸುವರ್ಣ
ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ದ.ಕ.ಜಿಲ್ಲಾ ಅಧ್ಯಕ್ಷರಾದ ಸಂಪತ್ ಬಿ. ಸುವರ್ಣ ಮಾತನಾಡಿ, ನಮ್ಮ ನೆಲದ ಶ್ರೇಷ್ಠ ಇತಿಹಾಸ, ಸಂಸ್ಕçತಿಯನ್ನು ನಾಳಿನ ನಾಡಿಗೆ ತಿಳಿಸುವ ಐತಿಹಾಸಿಕ ಕಾರ್ಯ ಇದು. ಮಂಜ ಬೈದ್ಯರ ತ್ಯಾಗ ಬಲಿದಾನ ಅಮರವಾಗಿ ಉಳಿಯುವ ನಿಟ್ಟಿನಲ್ಲಿ ಯಾವುದೇ ಸ್ಮಾರಕಗಳು, ಉಲ್ಲೇಖಗಳು ಇಲ್ಲದಿರುವುದು ವಿಪರ್ಯಾಸ ಹಾಗೂ ಇಂತಹ ಅನೇಕ ಪರಾಕ್ರಮಿಗಳ ಸಾಹಸಗಾಥೆಗಳು ನಮಗೆ ಅರಿವಿಲ್ಲದೆ ಹೋಗಿರುವುದು ನಮ್ಮ ದೌರ್ಬಲ್ಯ. ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ದ.ಕ.ಜಿಲ್ಲೆಯ ಸಮಿತಿಯನ್ನು ರಚಿಸಿ ವಿವಿಧ ಬೇಡಿಕೆಗಳು ಈಡೇರುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯಾಚರಿಸಲಿದೆ ಎಂದು ಸಮಿತಿಯ ಬೇಡಿಕೆಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ರಾಧಕೃಷ್ಣ ನಾಯಕ್, ವಕೀಲರಾದ ಅನಿಲ್ ಕುಮಾರ್ ಯು, ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ಕರುಣಾಕರ ಸುವರ್ಣ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಭುವನೇಂದ್ರ ರೈ, ಹಿರಿಯರಾದ ಅಪ್ಪಯ್ಯ ಮಣಿಯಾಣಿ, ಶಯನಾ ಜಯಾನಂದ, ಡಾ. ಸುಪ್ರೀತ್ ಲೋಬೋ, ಅಶ್ರಫ್, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಸಂಜೀವ ಪೂಜಾರಿ, ವರದರಾಜ್, ಪ್ರಕಾಶ್ ರೈ ಬೆಳ್ಳಿಪಾಡಿ, ಹರೀಶ್ ಟೈಲರ್, ಕೃಷ್ಣರಾವ್ ಅಜಿಲರು, ಬಜತ್ತೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಗಂಗಾಧರ ಗೌಡ, ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಸದಸ್ಯ ಸುರೇಶ್ ಅತ್ರಮಜಲು, ವಿದ್ಯಾಧರ ಜೈನ್, ಮಹಾಲಿಂಗ ನಾಯಕ್ ಕಜೆಕ್ಕಾರು, ಜಯವಿಕ್ರಮ ಕಲ್ಲಾಪು, ಮುಕುಂದ ಬಜತ್ತೂರ, ಎಲ್ಯಣ್ಣ ಪೂಜಾರಿ, ರಾಜೇಶ್ ಬಾಳೆಕಲ್ಲು, ಮಂಜ ಬೈದ್ಯರ ಕುಟುಂಬಸ್ಥರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಗಣ್ಯರು, ಮಂಜ ಬೈದ್ಯರ ಕುಟುಂಬಸ್ಥರು ಸೇರಿದಂತೆ, ಸೇರಿದಂತಹ ಎಲ್ಲರೂ ಮಂಜ ಬೈದ್ಯರ ಭಾವಚಿತ್ರಕೆ ಪುಷ್ಪಾರ್ಚನೆಯನ್ನು ಮಾಡಿ ಗೌರವ ಸಲ್ಲಿಸಿದರು. ದಂತ ವೈದ್ಯ ರಾಜಾರಾಮ್ ಕೆ.ಪಿ ಪ್ರಸ್ತಾವಿಸಿ ಸ್ವಾಗತಿಸಿದರು. ಕ್ರಾಂತಿ ವೀರ ಮಂಜಬೈದ್ಯರ ವಿಚಾರಗಳನ್ನು ಪತ್ರಕರ್ತ ಯು.ಎಲ್. ಉದಯರವರು ತಿಳಿಸಿದರು. ಉಷಾಚಂದ್ರ ಮುಳಿಯ ವಂದೇ ಮಾತರಂ ಹಾಡಿದರು. ಸುರೇಶ್ ಅತ್ರಮಜಲು ವಂದಿಸಿದರು.

Related posts

ಬೆಳ್ತಂಗಡಿ: ಅಜ್ಜಿಯನ್ನುಕೊಲೆ ಮಾಡಿ ಚಿನ್ನಾಭರಣ ದರೋಡೆ ಪ್ರಕರಣ: ಬಂಧಿತನಾಗಿದ್ದ ಆರೋಪಿ ಅಶೋಕ್ ಅಸೌಖ್ಯದಿಂದ ಸಾವು

Suddi Udaya

ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ: ಅಧ್ಯಕ್ಷರಾಗಿ ಜಯರಾಜ ಜೈನ್, ಖಜಾಂಚಿಯಾಗಿ ನಾರಾಯಣ ಶೆಟ್ಟಿ, ರಾಜ್ಯ ಪರಿಷತ್‌ ಸದಸ್ಯರಾಗಿ ಪ್ರದೀಪ್ ಕುಮಾರ್ ಆಯ್ಕೆ

Suddi Udaya

ಇಳಂತಿಲ : ಪ್ರಶಿಕ್ಷಣ ವರ್ಗ – ಹಿಂದೂ ಸಂಗಮದ ಆಮಂತ್ರಣ ಪತ್ರ ಬಿಡುಗಡೆ

Suddi Udaya

ಎಕ್ಸಲೆಂಟ್ ಮೂಡಬಿದ್ರೆ ಆಶ್ರಯದಲ್ಲಿ ಜಾಗೃತಿ ಅಭಿಯಾನ

Suddi Udaya

ಕಡಿರುದ್ಯಾವರ : ವಿದ್ಯುತ್ ಪರಿವರ್ತಕದಿಂದ ಕಿಡಿ ಸಿಡಿದು ವ್ಯಾಪಿಸಿದ ಬೆಂಕಿ

Suddi Udaya

ಕುವೆಟ್ಟು ಮತ್ತು ಕಣಿಯೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ: ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟರಿಂದ ಏಕನಾಥ ಶೆಟ್ಟಿ ಪ್ರತಿಮೆಗೆ ಮಾಲಾರ್ಪಣೆ

Suddi Udaya
error: Content is protected !!