24.6 C
ಪುತ್ತೂರು, ಬೆಳ್ತಂಗಡಿ
June 4, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿಸಮಸ್ಯೆ

ಮಚ್ಚಿನ ಪೈಯೊಟ್ಟುನಲ್ಲಿ ಜೋಪಡಿಯಲ್ಲಿ ಬಡ ಕುಟುಂಬ: ಸೋರುವ ಸೂರಿನಡಿ ತಾಯಿ, ಮಗಳ ಸಂಕಷ್ಟದ ಜೀವನ

ವರದಿ: ಬಿ.ಎಸ್. ಕುಲಾಲ್

ಬೆಳ್ತಂಗಡಿ: ಬಡವರ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಮನೆ ಇಲ್ಲದವರಿಗೆ ಮನೆ, ನಿವೇಶನ ಇಲ್ಲದವರಿಗೆ ನಿವೇಶನ ನೀಡುವ ಕಾರ್ಯವನ್ನು ಸರಕಾರಗಳು ಸ್ಥಳೀಯ ಸಂಸ್ಥೆಗಳ ಮೂಲಕ ಮಾಡುತ್ತಿದೆ. ಆದರೆ ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ತಲುಪಿದೆಯೇ, ತಲುಪದಿದ್ದರೆ ಯಾಕೆ..? ತಲುಪಿಲ್ಲ ಎಂಬುದನ್ನು ನೋಡುವವರಿಲ್ಲ. ಇದಕ್ಕೊಂದು ನೈಜ ಉದಾಹರಣೆ ಮಚ್ಚಿನ ಗ್ರಾಮದ ಪೈಯೊಟ್ಟು ಎಂಬಲ್ಲಿದೆ. ಮಹಿಳೆಯೋರ್ವರು ಅಭದ್ರತೆ ಹಾಗೂ ಕಿತ್ತುತಿನ್ನುವ ಬಡತನದಲ್ಲಿ ತನ್ನ ಅಪ್ರಾಪ್ತ ಪುತ್ರಿಯ ಜೊತೆ ಕಳೆದ ಹಲವಾರು ವರ್ಷಗಳಿಂದ ಜೋಪಡಿಯಲ್ಲಿಯೇ ಬದುಕು ಸಾಗಿಸುತ್ತಿರುವುದು ಮನಕಲಕುತ್ತಿದೆ.

ಮಚ್ಚಿನ ಗ್ರಾಮದ ಪೈಯೊಟ್ಟು ಎಂಬಲ್ಲಿ ದಿ| ಕಾಂತಪ್ಪ ಮೂಲ್ಯ ಎಂಬವರ ಪತ್ನಿ ಶ್ರೀಮತಿ ಸುಮತಿ ಅವರು ತನ್ನ ಪುತ್ರಿ ಕು| ಲಾವಣ್ಯ ಎಂಬ ಬಾಲಕಿ ಜೊತೆ ಜೋಪಡಿ ಮನೆಯೊಂದರಲ್ಲಿ ವಾಸ್ತವ್ಯವಿದ್ದು, ಇವರ ಬದುಕು ಅತ್ಯಂತ ಸಂಕಷ್ಟದ, ನರಕಯಾತನೆಯ ಸ್ಥಿತಿಯಾಗಿದೆ. ಪೈಯೊಟ್ಟು ಕಾಂತಪ್ಪ ಮೂಲ್ಯ ಮತ್ತು ಸುಮತಿ ಅವರದು ಕಡು ಬಡತನದ ಕುಟುಂಬ, ಇವರು ಅವಿದ್ಯಾವಂತರು. ಕಾಂತಪ್ಪ ಮೂಲ್ಯ ಕೂಲಿ ಮಾಡಿ, ಪತ್ನಿ ಸುಮತಿ ಬೀಡಿ ಕಟ್ಟಿದರೂ ಜೀವನ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಇವರು ಸರ್ವೆ ನಂಬ್ರ ೧೬೨ರಲ್ಲಿ ಒಂದು ಎಕ್ರೆ ಜಾಗವನ್ನು ಹೊಂದಿದ್ದು, ಈ ಜಾಗಕ್ಕೆ ಇವರ
ಹೆಸರಿನಲ್ಲಿ ದಾಖಲೆ ಆಗಿಲ್ಲ. ಇದಕ್ಕೆ ಅಕ್ರಮ ಸಕ್ರಮದಲ್ಲಿ ಅರ್ಜಿ ನೀಡಿದ್ದು, ಇವರ ಜಾಗ ಅಳತೆಯಾಗಿ ನಕ್ಷೆ ಕೂಡಾ ಆಗಿದೆ. ಆದರೆ ಅಕ್ರಮ-ಸಕ್ರಮ ಸಿಟ್ಟಿಂಗ್ ಇನ್ನೂ ಕೂಡಾ ನಡೆದಿಲ್ಲ.

ತಮ್ಮ ಜಾಗದಲ್ಲಿ ಕೃಷಿ ಮಾಡಿ, ಮನೆ ಕಟ್ಟಬೇಕೆಂಬ ದೊಡ್ಡ ಆಸೆ ಕಾಂತಪ್ಪ ಮೂಲ್ಯರಿಗಿತ್ತು. ಕೈಯಲ್ಲಿ ಹಣ ಇಲ್ಲ. ದುಡಿದ್ದು ಖರ್ಚಿಗೆ ಸಾಕಾಗುತ್ತಿಲ್ಲ, ದೂರದ ಊರಿಗೆ ಹೋಗಿಯಾದರೂ, ದುಡಿದು ಹಣ ಸಂಪಾದಿಸಿ ಮನೆಕಟ್ಟಿ ಸುಖ ಸಂಸಾರ ನಡೆಸಬೇಕು ಎಂಬ ಮಹತ್ವದ ಉದ್ದೇಶವನ್ನು ಇಟ್ಟುಕೊಂಡು ಅವರು ಬಾಂಬೈಗೆ ಹೋದರು. ಅಲ್ಲಿ ನಾಸಿಕ್‌ನಲ್ಲಿ ಹೋಟೇಲ್‌ವೊಂದಕ್ಕೆ ಉದ್ಯೋಗಕ್ಕೆ ಸೇರಿದರು. ಕೆಲ ವರ್ಷ ಅಲ್ಲಿ ಕೆಲಸ ಮಾಡಿದರು. ಕಳೆದ ನಾಲ್ಕು ವರ್ಷಗಳ ಹಿಂದೆ ಅವರು ತಮ್ಮ ಊರು ಮಚ್ಚಿನಕ್ಕೆ ಅಗತ್ಯ ಕೆಲಸಕ್ಕೆ ಬಂದಿದ್ದರು. ಆದರೆ ವಿಧಿಯ ಲೆಕ್ಕಾಚಾರವೇ ಬೇರೆಯಾಗಿತ್ತು. ಅವರು ಬಾಂಬೆಯಿಂದ ಬಂದ ಮರುದಿನವೇ ಮಧ್ಯ ರಾತ್ರಿ ಅವರಿಗೆ ಹೃದಯಾಘಾತವಾಗಿತ್ತು. ಎದೆನೋವಿನಿಂದ ಅಸ್ವಸ್ಥಗೊಂಡು ಪತ್ನಿ ಹಾಗೂ ಪುಟ್ಟ ಹೆಣ್ಣು ಮಗುವಿನ ಕಣ್ಣೇದುರೇ ಅವರು ಇಹಲೋಕ ತ್ಯಜಿಸಿದರು. ಪತಿಯನ್ನು ಕಳೆದುಕೊಂಡ ಸುಮತಿ ಮತ್ತು ಮಗು ಲಾವಣ್ಯ ಅನಾಥರಾದರು.

ಗಂಡನನ್ನು ಕಳೆದುಕೊಂಡ ಸುಮತಿಯವರಿಗೆ ದಿಕ್ಕೇ ತೋಚದಾಯಿತು. ದಿನವೂ ಕಣ್ಣೀರಲ್ಲಿ ಕೈತೊಳೆದರು. ಒಂದೆಡೆ ಬಡತನ, ಇನ್ನೊಂದು ಕಡೆ ದುಡಿಯುವ ಜೀವ ನಂದಿಹೋಗಿರುವುದು. ಆದರೆ ತನಗಿರುವ ಮಗು ಲಾವಣ್ಯಳಿಗಾಗಿ ಹೇಗಾದರೂ ಬದುಕಬೇಕು. ಅವಳನ್ನು ಒಂದು ದಡ ಸೇರಿಸಬೇಕು. ನಾನು ಅವಿದ್ಯಾವಂತಳಾದರೂ, ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಗಟ್ಟಿ ಮನಸ್ಸು ಮಾಡಿದರು. ಕಷ್ಟವನ್ನು ನುಂಗಿಕೊಂಡರು. ಮಗಳಿಗಾಗಿ ದುಡಿಯ ತೊಡಗಿದರು. ಸುಮತಿಯವರ ಪುತ್ರಿ ಲಾವಣ್ಯ ಈಗ ಪುಂಜಾಲಕಟ್ಟೆಯಲ್ಲಿ ದ್ವಿತೀಯ ಪಿ.ಯುನಲ್ಲಿ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದಾಳೆ.


ಜೋಪಡಿ ಮನೆಯಲ್ಲಿ ವಾಸ: ಸುಮತಿ ಹಾಗೂ ಅವರ ಪುತ್ರಿ ಲಾವಣ್ಯ ಅದೇ ಜೋಪಡಿಯಲ್ಲಿ ಈಗಲೂ ವಾಸವಾಗಿದ್ದಾರೆ. ಸುತ್ತಾ ಗೋಡೆಯ ಬದಲಿಗೆ ಪ್ಲಾಸ್ಟಿಕ್ ಹೊದಿಕೆ, ಮೇಲ್ಗಡೆ ಶೀಟ್ ಹಾಗೂ ಟರ್ಪಲ್ ಹೊದಿಕೆ ಇರುವ ಜೋಪಡಿಯಿದು. ತೆಂಗಿನ ಹಾಗೂ ಅಡಿಕೆಯ ಸಲಾಕೆಯನ್ನು ಜೋಡಿಸಿ ನಿರ್ಮಿಸಿದ್ದಾರೆ. ಕಾಂತಪ್ಪ ಅವರು ಜೀವಿತದಲ್ಲಿ ಮನೆಯ ಎರಡು ಬದಿಗೆ ಸ್ವಲ್ಪ ಎತ್ತರಕ್ಕೆ ಮಣ್ಣಿನ ಗೋಡೆ ಇಟ್ಟಿದ್ದಾರೆ ಬಿಟ್ಟರೆ ಮತ್ತೆ ಯಾವುದೇ ಕೆಲಸ ಮಾಡಿಲ್ಲ. ಮನೆಯ ಸುತ್ತಾ ಗೋಡೆ ಇಲ್ಲ, ಸೋರುವ ಸೂರಿನಡಿ ಗಾಳಿ-ಮಳೆಗೆ ಇದರಲ್ಲೇ ಇರಬೇಕು. ಮಳೆಗಾಲದಲ್ಲಿ ಇವರ ಪಾಡಂತೂ ಹೇಳತೀರದು. ಜಡಿಮಳೆ ಗಾಳಿಗೆ ರಾತ್ರಿ ಇಡೀ ನಿದ್ದೆ ಇಲ್ಲ, ಬೀಸುವ ಬಿರುಗಾಳಿಗೆ ಪ್ಲಾಸ್ಟಿಕ್ ಹೊದಿಕೆಯ ಚಾವಣಿ ಹರಿದು ಹೋಗುತ್ತಿದೆ. ಬೋರ್ಗರೆವ ಮಳೆಯ ನಡುವೆ ನೆನೆಯುತ್ತಲೇ ಜೀವಸಬೇಕಾಗಿದೆ. ಕಳೆದ ವರ್ಷ ತಡರಾತ್ರಿ ಬಿರುಗಾಳಿಗೆ ಜೋಪಡಿಗೆ ಹಾಕಿದೆ ಶೀಟ್ ಹೊದಿಕೆ ಪೂರ್ತಿ ಹಾರಿ ಹೋಗಿ, ಜಡಿಮಳೆಗೆ ಒದ್ದೆಯಾಗಿಕೊಂಡು ಹತ್ತಿರದ ಮನೆಗೆ ಓಡಿಕೊಂಡು ಹೋಗಿರುವುದನ್ನು ಈಗಲೂ ನೆನಪಿಸಿ ಭಯ ಪಡುತ್ತಿದ್ದಾರೆ. ಮಳೆಗಾಲ ಬಂತೆಂದರೆ ಇವರಿಗೆ ಎದೆಯಲ್ಲಿ ಎಲ್ಲಿಲ್ಲದ ಭಯ ಆವರಿಸುತ್ತದೆ. ಇವರು ಸರಕಾರದ ಆಶ್ರಯ ಯೋಜನೆಯಲ್ಲಿ ಮನೆಗೆ ಮಚ್ಚಿನ ಗ್ರಾ.ಪಂಕ್ಕೆ ಅರ್ಜಿ ನೀಡಿದ್ದಾರೆ. ಪಂಚಾಯತ್‌ನವರು ಬಂದು ಜೋಪಡಿ ನೋಡಿ ನಿಮಗೆ ಆದ್ಯತೆಯಲ್ಲಿ ಮನೆ ಮಂಜೂರು ಮಾಡುತ್ತೇವೆ, ನಿಮ್ಮ ಅರ್ಜಿ ಮೇಲೆ ಇದೆ ಎಂದು ಭರವಸೆ ನೀಡಿದ್ದಾರೆಯೇ ಹೊರತು ಇವರಿಗೆ ಮನೆ ಮಂಜೂರಾತಿ ಇನ್ನೂ ಆಗಿಲ್ಲ. ಭರವಸೆ ಭರವಸೆಯಾಗಿಯೇ ಉಳಿದಿದೆ.


ಅಕ್ರಮ ಸಕ್ರಮಕ್ಕೆ ಅರ್ಜಿ:
ಸುಮತಿಯವರಿಗೆ ಸುಮಾರು ಒಂದು ಎಕ್ರೆಯಷ್ಟು ಜಾಗವಿದ್ದು, ಇದರಲ್ಲಿ ಸುಮಾರು ೩೫ ಸೆಂಟ್ಸ್ ಜಾಗದಲ್ಲಿ ಅಡಿಕೆ ಗಿಡ ನೆಟ್ಟಿದ್ದಾರೆ. ಜಾಗದ ದಾಖೆಗಾಗಿ ಅಕ್ರಮ-ಸಕ್ರಮದಲ್ಲಿ ಅರ್ಜಿ ಹಾಕಿದ್ದಾರೆ. ಜಾಗದ ಅಳತೆಯಾಗಿ ನಕ್ಷೆ ಆಗಿದೆ. ಆದರೆ ಇವರ ಫೈಲ್ ಅಕ್ರಮ-ಸಕ್ರಮ ಸಿಟ್ಟಿಂಗ್‌ಗೆ ಬಂದಿಲ್ಲ. ಈ ನಡುವೆ ೯೪ಸಿ ಕಾನೂನು ಬಂದಾಗ ಅದಕ್ಕೂ ಅರ್ಜಿ ಹಾಕಿದ್ದು, ಇವರಿಗೆ ಆ ಯೋಜನೆಯಲ್ಲಿ 9 ಸೆಂಟ್ಸ್ ಜಾಗದ ಹಕ್ಕು ಪತ್ರವನ್ನು ಶಾಸಕ ಹರೀಶ್ ಪೂಂಜ ನೀಡಿದ್ದಾರೆ ಎಂದು ಸುಮತಿಯವರು ನೆನಪಿಸಿಕೊಳ್ಳುತ್ತಾರೆ.


ಸುಮತಿಯವರು ಕಡು ಬಡತನದಲ್ಲಿದ್ದಾರೆ. ಒಬ್ಬರೇ ದುಡಿದು ಇವರ ಜೀವನ ಸಾಗಬೇಕಾಗಿದೆ. ಜೊತೆ ಪುತ್ರಿಯ ಶಿಕ್ಷಣಕ್ಕೂ ಆರ್ಥಿಕ ಸಮಸ್ಯೆಯಿದೆ. ವಾಸ್ತವ್ಯಕ್ಕೆ ಮನೆಯೂ ಇಲ್ಲ, ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ. ಜೋಪಡಿ ಮನೆಯಲ್ಲಿ ದಿನ ಕಳೆಯುತ್ತಿದ್ದಾರೆ. ಪ್ರಜಾಪ್ರಭುತ್ವ ಬಂದು ದಶಕಗಳೇ ಸರಿದರೂ, ಇವರ ಬದುಕಿಗೆ ಬೆಳಕು ಹರಿದಿಲ್ಲ. ಜೀವನ ನಿರ್ವಹಣೆಯ ಸವಾಲಿನೊಂದಿಗೆ ಅಭದ್ರತೆಯ ಮನೆಯಲ್ಲಿ ಬದುಕು ಅನಿವಾರ್ಯವಾಗಿದೆ. ಈ ಬಡ ಕುಟುಂಬಕ್ಕೆ ಸಂತ್ವಾನ ಬೇಕಾಗಿದೆ. ಸಮಾಜದ ಬೆಂಬಲ ಅಗತ್ಯವಿದೆ. ಸರಕಾರದ, ದಾನಿಗಳ, ಸಂಘ ಸಂಸ್ಥೆಯವರ ನೆರವು ಬೇಕಾಗಿದೆ. ಹೊಸ ಮನೆ ನಿರ್ಮಾಣಕ್ಕೆ, ಪುತ್ರಿಯ ಶಿಕ್ಷಣಕ್ಕೆ ಆರ್ಥಿಕ ಸಹಕಾರ ಬೇಕಾಗಿದೆ. `ಜನಸೇವೆಯೇ ಜನಾರ್ದನ ಸೇವೆ’ ಎಂಬAತೆ ಇಂತಹ ಬಡಕುಟುಂಬಗಳಿಗೆ ನೀಡುವ ನಿಸ್ವಾರ್ಥ ಸೇವೆಯೇ ಸಾಕ್ಷಾತ್ ಭಗವಂತನಿಗೆ ಸಲ್ಲಿಸುವ ಪೂಜೆಯಾಗಿದೆ. ಸಹೃದಯಿ ದಾನಿಗಳು, ಸಹಕಾರ ನೀಡುವವರು ಸುಮತಿ: ಮೊ. 9535838953 ಸಂಪರ್ಕಿಸಬಹುದು. ಅಥವಾ ಬ್ಯಾಂಕ್ ಆಫ್ ಬರೋಡ ಎಕೌಂಟ್ ನಂಬ್ರ-70980100004523 (IFC: BARBOVJMACK MICR code 575012046) ತಮ್ಮ ಆರ್ಥಿಕ ನೆರವು ನೀಡಬಹುದು.

Related posts

ನಿಡ್ಲೆ ಗ್ರಾಮದ ಕಾಂಗ್ರೆಸ್ ಬೆಂಬಲಿಗರು ಹರೀಶ್ ಪೂಂಜ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

Suddi Udaya

ಬೆಳ್ತಂಗಡಿ ಸಿಎ ಬ್ಯಾಂಕ್ ನ ನೂತನ ಮೀಟಿಂಗ್ ಹಾಲ್ ನವೀಕರಿಸಿ ಉದ್ಘಾಟನೆ; ಮಾಸಿಕ ಸಭೆ

Suddi Udaya

ಕಲ್ಮಂಜ: ಅಕ್ಷಯ ನಗರದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಉರುವಾಲು ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ವಾರ್ಷಿಕ ಮಹಾಸಭೆ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಮತ್ತು ಡಿ.ಎಡ್. ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ

Suddi Udaya

ಕುತ್ಲೂರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಸಂತೋಷ್ ಪೂಜಾರಿರವರ ನೂತನ ಗೃಹಪ್ರವೇಶಕ್ಕೆ ಮಾಜಿ ಸಚಿವ ರಮಾನಾಥ್ ರೈ ಭೇಟಿ

Suddi Udaya
error: Content is protected !!