24.3 C
ಪುತ್ತೂರು, ಬೆಳ್ತಂಗಡಿ
June 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರಿಂದ ಮೊದಲ ದಿನವೇ 6 ಮೆಗಾ ಗ್ಯಾರಂಟಿ: ವಿದ್ಯಾರ್ಥಿಗಳಿಗೂ ಫ್ರೀ ಬಸ್ ಪಾಸ್- ಯುವ ಜನರಿಗೆ ಉದ್ಯೋಗ ಗ್ಯಾರಂಟಿ- ಜೋಡೋ ಯುವ ಸಂಘ ರಚನೆ

ಬೆಳ್ತಂಗಡಿ: ತಮ್ಮ ಮೊದಲ ಸಚಿವ ಸಂಪುಟದಲ್ಲಿ ಯುವಕರು ಹಾಗೂ ರೈತರ ಸಮಸ್ಯೆ ಬಗೆಹರಿಸುವುದಕ್ಕೆ ವಿಶೇಷ ಒತ್ತು ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ‘ಯುವಯುಗ’ದ ಆದ್ಯತೆ ಗಳಿಗೆ ಸ್ಪಂದಿಸಲು ನಿರ್ಧಿಸಿದ್ದು, ರಾಜ್ಯದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದೂ ಸೇರಿ 6 ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಡೆಸಿದ ಮೊದಲ ಸಂಪುಟ ಸಭೆಯಲ್ಲಿ ಯುವಕರು, ರೈತರು, ಮೂಲ ಸೌಕರ್ಯ ವ್ಯವಸ್ಥೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಗಿದ್ದು, ಗ್ರಾಮೀಣ ಪ್ರದೇಶಗಳಿಂದ ರೈತರ ವಲಸೆ ತಡೆಗಟ್ಟುವುದಕ್ಕೆ ಬೇಕಾದ ಯೋಜನೆ ರೂಪಿಸಲು ಮುಖ್ಯ ಮಂತ್ರಿ ಶಿವಕುಮಾರ್ ನಿರ್ಧರಿಸಿದ್ದಾರೆ.

ಪತ್ರಿಕಾಗೋಷ್ಠಿ ಸಂಪುಟ ಸಭೆಯ ಬಳಿಕ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್, ಹಿರಿಯ ಸಚಿವರಾದ ಕೆ.ಎಚ್.ಮುನಿಯಪ್ಪ, ಯು.ಟಿ.ಖಾದರ್‌ಜತೆ ನಡೆಸಿದ ಸಿಎಂ ಶಿವಕುಮಾರ್‌ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದರು. ಕೃಷಿ ಕ್ಷೇತ್ರವನ್ನು ‘ಕನಿಷ್ಠ’ ಎಂಬ ಭಾವನೆ ತಪ್ಪಿಸುವ ಸವಾಲು ನಮ್ಮ ಮುಂದೆ ಇದೆ. ಅಲ್ಲದೆ, ರೈತರು ಹಾಗೂ ಯುವಕರ ಸಮಸ್ಯೆ ಬಗೆಹರಿಸುವ ದೊಡ್ಡ ಸವಾಲೂ ಇದೆ. ಯುವಯುಗಕ್ಕೆ ಬೇಕಾದ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮೊದಲ ದಿನವೇ 6 ಮೆಗಾ ಗ್ಯಾರಂಟಿ:

  1. ವಿದ್ಯಾರ್ಥಿಗಳಿಗೂ ಫ್ರೀ ಬಸ್:- ‘ಶಕ್ತಿ’ ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ರಾಜ್ಯ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲ ವಿದ್ಯಾರ್ಥಿಗಳಿಗೂ ವಿಸ್ತರಣೆ ಮಾಡಲಾಗಿದೆ. ಅಂದರೆ, 1ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗೆ ವ್ಯಾಸಂಗ ಮಾಡುವ ಎಲ್ಲ ವಿದ್ಯಾರ್ಥಿಗಳು ಇನ್ನುಮುಂದೆ ರಿಯಾಯಿತಿ ಬಸ್ ಪಾಸ್ ಬದಲಿಗೆ ಉಚಿತವಾಗಿ ಪ್ರಯಾಣ ಮಾಡಬಹುದು. ಆದರೆ ಇದಕ್ಕೆ ಅರ್ಜಿ ಸಲ್ಲಿಸಿ ಪಾಸ್ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ.
  2. ಯುವಜನರಿಗೆ ಉದ್ಯೋಗ ಗ್ಯಾರಂಟಿ:- ಹಣಕಾಸು ಇಲಾಖೆ ಅನುಮೋದನೆಯೊಂದಿಗೆ ಒಟ್ಟು 56,432 ಹುದ್ದೆಗಳ ನೇಮಕ ಪ್ರಕ್ರಿಯೆ ಶುರುವಾಗಿದೆ. ಈ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು. ಅದಕ್ಕಾಗಿ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಸಭೆ ನಡೆಸಿ, ಒಂದು ತಿಂಗಳೊಳಗೆ ಇಲಾಖಾವಾರು ವೇಳಾಪಟ್ಟಿ ಪ್ರಕಟಿಸಲಾಗುವುದು.
  3. ಖಾಸಗಿಯಲ್ಲೂ ಉದ್ಯೋಗ ಅವಕಾಶ:-ಮಾನವ ಸಂಪನ್ಮೂಲದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಜತೆಗೆ, ಜಾಗತಿಕ ಕೈಗಾರಿಕಾ ಭೂಪಟದಲ್ಲಿ ರಾಜ್ಯ ಗುರುತಿಸಿಕೊಂಡಿದೆ. ಹಾಗಾಗಿ, ಐಟಿ, ಬಿಟಿ ಹೊರತಾಗಿಯೂ ನಾನಾ ಉದ್ಯಮ ವಲಯಗಳಲ್ಲಿ ಸ್ಥಳೀಯ ಯುವಜನರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವುದು ಸರಕಾರದ ಆದ್ಯತೆ. ಅದಕ್ಕಾಗಿ ಖಾಸಗಿ ಉದ್ಯೋಗವಕಾಶ ಪಡೆಯಲು ಸಾಧ್ಯವಾಗುವಂತೆ ರಾಜ್ಯ ಸರಕಾರದ ವತಿಯಿಂದ ‘ಫೆಸಿಲಿಟೇಶನ್ ಸೆಂಟರ್’ ಸ್ಥಾಪನೆ ಮಾಡಲಾಗುವುದು. ಹಿಂದಿನ ಉದ್ಯೋಗ ವಿನಿಮಯ ಕೇಂದ್ರಗಳ ಮಾದರಿಯಲ್ಲಿ ಯುವ ಜನರು ಇಲ್ಲಿ ನೋಂದಾಯಿಸಿ, ನಾನಾ ಉದ್ಯಮ ವಲಯಗಳಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗಲಿದೆ. ಜತೆಗೆ, ಖಾಸಗಿ ಉದ್ಯಮಗಳು ನಾನಾ ಹಂತದ ಹುದ್ದೆಗಳಲ್ಲಿ ಇಂತಿಷ್ಟು ಪ್ರಮಾಣದ ಉದ್ಯೋಗಗಳನ್ನು ಕನ್ನಡಿಗರಿಗೆ ಒದಗಿಸಬೇಕು ಎಂಬುದನ್ನು ಕಡ್ಡಾಯ ಮಾಡಲಾಗುವುದು. ಅಗತ್ಯ ಮತ್ತು ಅರ್ಹತೆ ಆಧರಿಸಿ ಕನ್ನಡಿಗ ಯುವಜನರಿಗೆ ಉದ್ಯೋಗ ಕಲ್ಪಿಸುವ ಈ ಆಶಯಕ್ಕೆ ಒಂದು ತಿಂಗಳ ಕಾಲಮಿತಿಯೊಳಗೆ ವ್ಯವಸ್ಥಿತ ಚೌಕಟ್ಟು ನಿರ್ಮಿಸುವ ಜವಾಬ್ದಾರಿಯನ್ನು ಮೂವರು ಸಚಿವರ ತಂಡಕ್ಕೆ ನೀಡಲಾಗಿದೆ.
  4. ‘ಭಾರತ್ ಜೋಡೋ ಯುವ ಸಂಘ’ ರಚನೆ:- ಯುವ ಜನರನ್ನು ಸ್ವಾಭಿಮಾನಿ, ಸ್ವಾವಲಂಬಿಯಾಗಿ ರೂಪಿಸಲು ಹಾಗೂ ಸಮಾಜದ ಆಸ್ತಿಯಾಗಿ ಅವರನ್ನು ರೂಪಿಸಲು ರಾಜ್ಯಾದ್ಯಂತ 10 ಸಾವಿರ ‘ಭಾರತ್ ಜೋಡೋ’ ಯುವ ಸಂಘಗಳನ್ನು ರಚಿಸಲಾಗುವುದು. ಪ್ರತಿ ಪಂಚಾಯತ್‌ಗೆ ಒಂದರಂತೆ 6 ಸಾವಿರ ಸಂಘಗಳು ಹಾಗೂ ನಗರ ಪ್ರದೇಶಗಳಲ್ಲಿ ವಾರ್ಡ್‌ಗೆ ಒಂದರಂತೆ 4 ಸಾವಿರ ಸಂಘಗಳನ್ನು ಸ್ಥಾಪಿಸಲಾಗುವುದು. ಪ್ರತಿಯೊಂದು ಯುವ ಸಂಘಗಳಿಗೂ ಸರಕಾರದಿಂದ 10 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು. ಈ ಉದ್ದೇಶಕ್ಕೆ ಸುಮಾರು 1 ಸಾವಿರ ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ.
  5. ಓಸಿ, ಸಿಸಿ ಭಾಗ್ಯ, ಭೂ ಗ್ಯಾರಂಟಿ ವಿಸ್ತರಣೆ:- ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಜಾರಿಗೊಳಿಸಿರುವ ಯೋಜನೆಯನ್ನು ಗ್ರಾಮೀಣ ಪ್ರದೇಶಗಳನ್ನೂ ಒಳಗೊಂಡು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಅಂದರೆ, ನಗರ ಮತ್ತು ಗ್ರಾಮೀಣ ಭಾಗದಲ್ಲಿ 60/40 ಅಳತೆಯ 2,400 ಚದರಡಿ ವರೆಗಿನ ವಸತಿ ಕಟ್ಟಡಗಳನ್ನು ಒಂದು ಸಲದ ಕ್ರಮವಾಗಿ (ಒಟಿಎಸ್) ಸಕ್ರಮ ಮಾಡಲಾಗುವುದು. ಶೇ.20 ರವರೆಗಿನ ನಕ್ಷೆ ಉಲ್ಲಂಘನೆಗೆ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ.
  6. ರಾಜಧಾನಿ ರಸ್ತೆಗಳಿಗೆ ಹೊಳಪು:- ರಾಜಧಾನಿ ಬೆಂಗಳೂರಿನ ಪ್ರಮುಖ ರಸ್ತೆಗಳ ಜತೆಗೆ, ಉಳಿದೆಲ್ಲಾ ರಸ್ತೆಗಳನ್ನು ಸಂಪೂರ್ಣ ಡಾಂಬರೀಕರಣ ಮಾಡಲಾಗುವುದು. ಈ ಉದ್ದೇಶಕ್ಕೆ 2 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗುವುದು. ಜಿಬಿಎ ಮತ್ತು ಬಿಡಿಎ ವ್ಯಾಪ್ತಿಯ ಎಲ್ಲ ರಸ್ತೆಗಳನ್ನು ಡಾಂಬರೀಕರಣ ಮಾಡುವ ಈ ಕಾರ್ಯವನ್ನು ಮುಂದಿನ 3 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು.

Related posts

ಬೆಳ್ತಂಗಡಿ ಪ.ಪಂ. ಮತ್ತು ರಾಜ ಕೇಸರಿ ಸಂಘಟನೆ ವತಿಯಿಂದ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಎಸ್ ಎಸ್ ಎಲ್ ಸಿ ಯ ಅಗ್ರಸಾಧಕಿ ರಾಜ್ಯಕ್ಕೆ 2ನೇ‍ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿನಿ ಕು.ಪ್ರಾ‍‍‍ಥ೯ನಾ ‍ಎಚ್.ಕೆ ಗೆ ಸನ್ಮಾನ

Suddi Udaya

ಬೆಳ್ತಂಗಡಿ: ಶ್ರೀರಾಮ ಕ್ರೆಡಿಟ್ ಕೋ ಆಪರೇಟಿವ್ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಣೆ

Suddi Udaya

ಯಕ್ಷಭಾರತಿಯಿಂದ ಭಾರತ ಮಾತಾ ಪೂಜನ ಕಾರ್ಯಕ್ರಮ

Suddi Udaya

ತೋಟತ್ತಾಡಿ : ಯಾಂತ್ರಿಕೃತ ಭತ್ತದ ಬೇಸಾಯ “ಯಂತ್ರಶ್ರೀ” ತರಬೇತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ

Suddi Udaya

ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಸಂಘಟನೆಯ ದಕ್ಷಿಣ ಮಧ್ಯವಲಯದ ಉಪಾಧ್ಯಕ್ಷರಾಗಿ ಎ.ಎಸ್. ಲೋಕೇಶ್ ಶೆಟ್ಟಿ ಧರ್ಮಸ್ಥಳ ಆಯ್ಕೆ

Suddi Udaya
error: Content is protected !!