27.9 C
ಪುತ್ತೂರು, ಬೆಳ್ತಂಗಡಿ
June 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿಶೇಷ ಗ್ರಾಮ ಸಭೆ

ಉಜಿರೆ: ಮಹಾತ್ಮ ಗಾಂಧಿ ಉಜಿರೆ ಗ್ರಾಮ ಪಂಚಾಯತ್ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳ ಕುಂದುಕೊರತೆಗಳು, ಅಭಿವೃದ್ಧಿ ಅಗತ್ಯತೆಗಳು ಹಾಗೂ ಸರ್ಕಾರಿ ಸೌಲಭ್ಯಗಳ ಕುರಿತು ವಿಶೇಷ ಗ್ರಾಮ ಸಭೆಯನ್ನು ಉಜಿರೆ ಗ್ರಾಮ ಪಂಚಾಯತ್‌ನ ಸುವರ್ಣ ಸೌಧ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸಭೆಯನ್ನು ಆರಂಭಿಸಲಾಯಿತು

ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಶ್ರೀ ಮಹಾವೀರ ಶೇಬಣ್ಣವರ ಅವರು ವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಅವರು, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ನಾಗರಿಕರಿಗೆ ಅಭಿನಂದನೆ ಸಲ್ಲಿಸಿ, ವೈಯಕ್ತಿಕ ಹಾಗೂ ಸಾರ್ವಜನಿಕ ಸೌಲಭ್ಯಗಳಿಗೆ ಸಂಬಂಧಿಸಿದ ಬೇಡಿಕೆಗಳನ್ನು ಗ್ರಾಮ ಸಭೆಯ ಮೂಲಕ ಸ್ವೀಕರಿಸಿ ಗ್ರಾಮ ಪಂಚಾಯತ್ ವತಿಯಿಂದ ಪ್ರಾಮಾಣಿಕವಾಗಿ ಸ್ಪಂದಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಗ್ರಾಮ ಸಭೆಯ ಉದ್ದೇಶವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಿದರು.

ಗ್ರಾಮ ಮಟ್ಟದಲ್ಲಿ ಈ ರೀತಿಯ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಿರುವುದು ವಿಶಿಷ್ಟ ಪ್ರಯತ್ನವಾಗಿದ್ದು, ಸರ್ಕಾರದ ಆದೇಶದಂತೆ ಪ್ರಥಮ ಬಾರಿಗೆ ಉಜಿರೆ ಗ್ರಾಮ ಪಂಚಾಯತ್‌ನಲ್ಲಿ ಸಭೆ ನಡೆಸಿರುವುದಕ್ಕೆ ಗ್ರಾಮದ ಪ್ರಮುಖರು ಅಭಿನಂದನೆ ಸಲ್ಲಿಸಿದರು. ಗ್ರಾಮಸ್ಥರು ಆಸಕ್ತಿಯಿಂದ ಭಾಗವಹಿಸಿ ತಮ್ಮ ಕುಂದುಕೊರತೆಗಳು ಹಾಗೂ ಅಭಿವೃದ್ಧಿ ಬೇಡಿಕೆಗಳನ್ನು ಸಭೆಯ ಮುಂದಿಟ್ಟರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀಮತಿ ಹೇಮಲತಾ ಮಾತನಾಡಿ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ, ಎಲ್‌ಎಲ್‌ಬಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ದೊರೆಯುವ ಪ್ರೋತ್ಸಾಹಧನಗಳ ಕುರಿತು ಮಾಹಿತಿ ನೀಡಿದರು. ಅಂತರ್ಜಾತಿ ವಿವಾಹ ಪ್ರೋತ್ಸಾಹಧನ, ಒಳಪಂಗಡ ವಿವಾಹ ಪ್ರೋತ್ಸಾಹಧನ, ವಿಧವಾ ಮರುವಿವಾಹ ಪ್ರೋತ್ಸಾಹಧನ ಹಾಗೂ ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿಶೇಷ ಪ್ರೋತ್ಸಾಹಧನಗಳ ಕುರಿತು ವಿವರಿಸಿದರು.

ಗ್ರಾಮಸ್ಥರಾದ ಸಿ.ಕೆ. ಚಂದ್ರಕಲಾ, ವೆಂಕಪ್ಪ ಹಾಗೂ ಶ್ರೀನಿವಾಸ ಅವರು ಮಾತನಾಡಿ, ಮುಂದಿನ ದಿನಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಮಾತ್ರವಲ್ಲದೆ ಇತರೆ ಇಲಾಖೆಗಳ ಅಧಿಕಾರಿಗಳನ್ನೂ ವಿಶೇಷ ಗ್ರಾಮ ಸಭೆಗೆ ಆಹ್ವಾನಿಸಿ, ಗ್ರಾಮಸ್ಥರಿಗೆ ತಮ್ಮ ಸಮಸ್ಯೆಗಳನ್ನು ನೇರವಾಗಿ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಈ ಕುರಿತು ಗ್ರಾಮ ಸಭೆಯಲ್ಲಿ ಚರ್ಚಿಸಿ ಮುಂದಿನ ಸಭೆಗಳಲ್ಲಿ ಹೆಚ್ಚಿನ ಇಲಾಖೆಗಳ ಭಾಗವಹಿಸುವಿಕೆಗೆ ಕ್ರಮ ಕೈಗೊಳ್ಳಲು ಅಭಿಪ್ರಾಯ ವ್ಯಕ್ತವಾಯಿತು.

ಉಜಿರೆ ಗ್ರಾಮ ಪಂಚಾಯತ್‌ನ ಶೇಕಡಾ 25ರ ಶ್ರೇಯೋಭಿವೃದ್ಧಿ ಅನುದಾನದಡಿ ನೀಡಲಾಗುವ ವಿದ್ಯಾರ್ಥಿ ವೇತನವನ್ನು ಪಿಯುಸಿ ವಿದ್ಯಾರ್ಥಿಗಳಿಗೆ ಕನಿಷ್ಠ ₹5,000 ಹಾಗೂ ಪದವಿ ಮತ್ತು ವೃತ್ತಿಪರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಕನಿಷ್ಠ ₹10,000ಕ್ಕೆ ಹೆಚ್ಚಿಸಲು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಗ್ರಾಮಸ್ಥರು ಕೋರಿದರು. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಗ್ರಾಮ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಸಭೆಯಲ್ಲಿ ಮನೆ ದುರಸ್ತಿ ಸಹಾಯಧನಕ್ಕಾಗಿ ಹಲವಾರು ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಿದರು. ವೈದ್ಯಕೀಯ ಸಹಾಯಧನಕ್ಕಾಗಿ ಮನವಿಗಳೂ ಸಲ್ಲಿಕೆಯಾಗಿದ್ದು, ಈ ಕುರಿತು ಚರ್ಚಿಸಿದ ಗ್ರಾಮ ಸಭೆಯು, ಈ ಹಿಂದೆ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳ ಅಡಿಯಲ್ಲಿ ನೆರವು ಪಡೆಯದ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ವೈದ್ಯಕೀಯ ಸಹಾಯಧನ ನೀಡಲು ಕ್ರಮ ಕೈಗೊಳ್ಳುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿತು.

ಆರ್ಥಿಕ ಸಾಕ್ಷರತಾ ಅಧಿಕಾರಿ ಉಷಾ ವಿ. ನಾಯಕ್ ಅವರು ಮಾತನಾಡಿ, ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪದವೀಧರ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದ ಸ್ಪರ್ಧಾತ್ಮಕ ಪರೀಕ್ಷೆಗಳು, ಉದ್ಯೋಗಾವಕಾಶಗಳು ಹಾಗೂ ತರಬೇತಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಪ್ರಧಾನ ಮಂತ್ರಿ ಜನಧನ್ ಯೋಜನೆ, ಸ್ವಉದ್ಯೋಗ ಯೋಜನೆಗಳು, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು, ಸಾರ್ವಜನಿಕ ಭವಿಷ್ಯ ನಿಧಿ (PPF), ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಹಾಗೂ ಜನ ಸುರಕ್ಷಾ ಪೋರ್ಟಲ್ ಕುರಿತು ವಿವರಿಸಿದರು. ಹೆಣ್ಣು ಮಕ್ಕಳಿಗಾಗಿ ಕೆನರಾ ಏಂಜಲ್ ಖಾತೆಯ ಪ್ರಯೋಜನಗಳ ಬಗ್ಗೆಯೂ ಮಾಹಿತಿ ನೀಡಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಕ-ಯುವತಿಯರಿಗೆ ವಿವಿಧ ಮಂಡಳಿಗಳು ಹಾಗೂ ಬ್ಯಾಂಕುಗಳ ಮೂಲಕ ದೊರೆಯುವ ಸ್ವಉದ್ಯೋಗ ಯೋಜನೆಗಳು ಹಾಗೂ ಕೌಶಲ್ಯಾಭಿವೃದ್ಧಿ ತರಬೇತಿಗಳ ಕುರಿತು ಮಾಹಿತಿ ನೀಡಿದ ಅವರು, ಕಾಲನಿಗಳಲ್ಲಿ ಕನಿಷ್ಠ 30 ಆಸಕ್ತ ಯುವಕ-ಯುವತಿಯರು ಇದ್ದಲ್ಲಿ ಪಂಚಾಯತ್ ಸಹಯೋಗದೊಂದಿಗೆ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಬಳಿಕ ಗ್ರಾಮ ಪಂಚಾಯತ್‌ನ ಸ್ವಂತ ನಿಧಿಯ ಶೇಕಡಾ 25ರಡಿಯಲ್ಲಿ ಕಾಯ್ದಿರಿಸಿರುವ ಅನುದಾನದಡಿ ಒದಗಿಸಬಹುದಾದ ಸೌಲಭ್ಯಗಳ ಕುರಿತು ಗ್ರಾಮಸ್ಥರಿಗೆ ಮಾತನಾಡಲು ಅವಕಾಶ ನೀಡಲಾಯಿತು. ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಎಲ್ಲ ಕುಟುಂಬಗಳಿಗೆ ಅನುಕೂಲವಾಗುವ ಹಾಗೂ ಪಂಚಾಯತ್ ಬಜೆಟ್ ವ್ಯಾಪ್ತಿಯೊಳಗೆ ಬರುವ ವೈಯಕ್ತಿಕ ಸೌಲಭ್ಯಗಳ ಕುರಿತು ಅಭಿಪ್ರಾಯ ಸಂಗ್ರಹಿಸಲಾಯಿತು. ಪ್ರತಿ ಕುಟುಂಬಕ್ಕೂ ಅಂದಾಜು ₹4,000 ರಿಂದ ₹5,000 ಮೌಲ್ಯದ ಕಬ್ಬಿಣದ ರಾಕ್ (ಶೆಲ್ಫ್) ಒದಗಿಸುವಂತೆ ಗ್ರಾಮಸ್ಥರು ಒಕ್ಕೊರಲಿನಿಂದ ಮನವಿ ಮಾಡಿದರು. ಅದರಂತೆ ಸದರಿ ಸೌಲಭ್ಯಕ್ಕಾಗಿ ನಿಧಿ ಕ್ರಿಯಾ ಯೋಜನೆಯಲ್ಲಿ ಅನುದಾನ ಕಾಯ್ದಿರಿಸಲು ಗ್ರಾಮ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು

ಸಭೆಯಲ್ಲಿ ವಿವಿಧ ಸಾರ್ವಜನಿಕ ಕಾಮಗಾರಿಗಳ ಬೇಡಿಕೆಗಳೂ ಕೇಳಿಬಂದವು. ಒಮಕೆಶಿನಿ ನಿಲಯ–ಪೆರ್ಲ ರಸ್ತೆಯ ಎಸ್‌ಟಿ ಕಾಲನಿಗೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆಯ ದುರಸ್ತಿ, ಅಡ್ಡಳಿಕೆ ಪ್ರದೇಶದ ಎಸ್‌ಟಿ ಕಾಲನಿಗೆ ರಸ್ತೆ, ಬೀದಿದೀಪ, ಮೋರಿ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಜಮೀನು ಕಾಯ್ದಿರಿಸಲು ತಹಶೀಲ್ದಾರರಿಗೆ ಪತ್ರ ಬರೆಯುವುದು, ಎಸ್‌ಸಿ ಕಾಲನಿಯ ಸ್ಮಶಾನ ಅಭಿವೃದ್ಧಿ, ಗಾಂಧಿನಗರ ಎಸ್‌ಸಿ ಕಾಲನಿಗೆ ಬೀದಿದೀಪ ಹಾಗೂ ಸಿಸಿ ಚರಂಡಿ ನಿರ್ಮಾಣ, ಮುಂಡತೋಡಿ–ನಾನಿಲ್ದಡಿ ರಸ್ತೆಯ ಎಸ್‌ಸಿ ಕಾಲನಿಗೆ ಕಾಂಕ್ರೀಟ್ ರಸ್ತೆ, ಬಡೆಕೊಟ್ಟು ಕ್ರಾಸ್‌ನಲ್ಲಿ ಚರಂಡಿ ನಿರ್ಮಾಣ, ಅತ್ತಾಜೆ ಕುಂಟಿನಿ ಹಾಗೂ ಗಾಂಧಿನಗರ ರಸ್ತೆ ಬದಿಯಲ್ಲಿ ಸ್ವಚ್ಛತೆಗಾಗಿ ಸೌರಶಕ್ತಿ ಚಾಲಿತ ಸಿಸಿಟಿವಿ ಅಳವಡಿಕೆ, ಅಪಾಯಕಾರಿ ಮರಗಳ ತೆರವು ಹಾಗೂ ತಡೆಗೋಡೆಗಳ ಪರಿಶೀಲನೆ ಸೇರಿದಂತೆ ಹಲವು ಬೇಡಿಕೆಗಳನ್ನು ಗ್ರಾಮಸ್ಥರು ಮಂಡಿಸಿದರು.

ಕುಡಿಯುವ ನೀರಿನ ಮೀಟರ್ ಬಿಲ್ ಕುರಿತು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಇದು ಸರ್ಕಾರದ ಆದೇಶದಂತೆ ಜಾರಿಗೊಂಡಿರುವ ವ್ಯವಸ್ಥೆಯಾಗಿದ್ದು, ನೀರಿನ ಮಿತವ್ಯಯ ಬಳಕೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು. ಆದಾಗ್ಯೂ ಕುಡಿಯುವ ನೀರಿನ ಶುಲ್ಕದಲ್ಲಿ ರಿಯಾಯಿತಿ ನೀಡುವ ಕುರಿತು ಸರ್ಕಾರಕ್ಕೆ ಪತ್ರ ಬರೆಯಲು ಗ್ರಾಮ ಸಭೆಯು ಸರ್ವಾನುಮತದಿಂದ ಶಿಫಾರಸು ಮಾಡಿತು.

ಅಧ್ಯಕ್ಷೀಯ ಭಾಷಣ ಮಾಡಿದ ಆಡಳಿತಾಧಿಕಾರಿ ಮಹಾವೀರ ಶೇಬಣ್ಣವರ ಅವರು, ಸಾಮಾನ್ಯ ಗ್ರಾಮ ಸಭೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು. ಸಭೆಯ ಆರಂಭದಿಂದ ಅಂತ್ಯದವರೆಗೆ ಸಾರ್ವಜನಿಕರು ಇಲಾಖೆಗಳ ಮಾಹಿತಿಯನ್ನು ಆಸಕ್ತಿಯಿಂದ ಆಲಿಸಿ ತಮ್ಮ ಬೇಡಿಕೆಗಳನ್ನು ಸಲ್ಲಿಸಿರುವುದನ್ನು ಶ್ಲಾಘಿಸಿದ ಅವರು, ಭಾಗವಹಿಸಿದ ಎಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಾಗರಿಕರಿಗೆ ಅಭಿನಂದನೆ ಸಲ್ಲಿಸಿದರು.

ಕಾರ್ಯದರ್ಶಿ ಶ್ರವಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯತ್ ಲೆಕ್ಕ ಸಹಾಯಕಿ ಮಮತಾ ಸ್ವಾಗತಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿ ಮೋಹನ್ ವಂದನಾರ್ಪಣೆ ಮಾಡಿದರು. ಗ್ರಾಮ ಪಂಚಾಯತ್‌ನ ಎಲ್ಲಾ ಸಿಬ್ಬಂದಿಗಳು ಸಭೆಯ ಯಶಸ್ವಿ ನಿರ್ವಹಣೆಗೆ ಸಹಕರಿಸಿದರು.

Related posts

ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಚುನಾವಣಾ ಪ್ರಭಾರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಡಿ.21: ಜಂಇಯ್ಯತುಲ್ ಉಲಮಾ ಮತ್ತು ಎಸ್.ಕೆ.ಎಸ್.ಎಸ್.ಎಫ್ ಮದ್ದಡ್ಕ ಶಾಖೆಯ ಸಹಯೋಗದಲ್ಲಿ ಮದ್ದಡ್ಕದಲ್ಲಿ ಬೃಹತ್ ಸಮಸ್ತ ಆದರ್ಶ ಪ್ರಚಾರ ಸಮ್ಮೇಳನ

Suddi Udaya

ಮಡಂತ್ಯಾರು: ಭಿಕ್ಷೆ ಬೇಡುವವನ ನೆಪದಲ್ಲಿ ಬಂದು ಪವರ್ ಹೌಸ್ ಬ್ಯಾಟರಿ ಅಂಗಡಿಯಿಂದ ಮೊಬೈಲ್ ಕಳವು

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಭೇಟಿ

Suddi Udaya

ಉಜಿರೆಯ ಎಸ್.ಡಿ.ಎಂ ಪ.ಪೂ ಕಾಲೇಜಿನ ಬಹುಮಾನ ವಿತರಣಾ ಕಾರ್ಯಕ್ರಮ – ” ಪುರಸ್ಕಾರ 2024 “

Suddi Udaya

ಬೆಳ್ತಂಗಡಿ: ದೀಪಾವಳಿ ಹಬ್ಬದ ಪ್ರಯುಕ್ತ ಆಧಿನಾಥ್ ಬಜಾಜ್‌ನಲ್ಲಿ ಗ್ರಾಹಕರಿಗೆ ವಿಶೇಷ ಆಫರ್

Suddi Udaya
error: Content is protected !!