September 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ರೋಟರಿ ಕ್ಲಬ್ ಬೆಳ್ತಂಗಡಿ, ಫೆಡರಲ್ ಬ್ಯಾಂಕ್, ಮಂಗಳೂರಿನ ಕೆಎಂಸಿ ರಕ್ತ ನಿಧಿ ಕೇಂದ್ರ, ಅತ್ತಾವರ, ಮಂಗಳೂರು ವಿಭಾಗದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗು ಉಜಿರೆಯ ಎಸ್‌ಡಿಎಂ ಕಾಲೇಜಿನ ರೆಡ್ ಕ್ರಾಸ್ ಘಟಕಗಳ ಸಹಯೋಗದೊಂದಿಗೆ ಕಾಲೇಜಿನ ಬೋಟನಿ ಲ್ಯಾಬ್ ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ರಕ್ತದಾನದ ಉದ್ಘಾಟನಾ ಕಾರ್ಯಕ್ರಮವನ್ನು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಕೆ ವಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ವಿಜ್ಞಾನದಲ್ಲಿ ಅನೇಕ ಸಂಶೋಧನೆಗಳು ನಡೆದಿವೆ. ಆದರೆ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಯಾವುದೂ ಬಂದಿಲ್ಲ. ರಕ್ತದಾನ ಮಾಡುವುದು ಒಂದು ಮಹತ್ತರವಾದ ಕಾರ್ಯ. ಈ ಶಿಬಿರವು ಸೇವೆಯ ಜೊತೆಗೆ ಆರೋಗ್ಯದ ಜಾಗೃತಿಯನ್ನು ಮೂಡಿಸುತ್ತದೆ. ದಾನದಿಂದ ಸಂಗ್ರಹವಾದ ರಕ್ತ ಅನೇಕರ ಬದುಕನ್ನು ಉಳಿಸುತ್ತದೆ. ಇವೆಲ್ಲದಕ್ಕೂ ಮಿಗಿಲಾಗಿ ರಕ್ತದಾನದಿಂದ ಯಾವುದೇ ಆರೋಗ್ಯದ ನಷ್ಟ ಇಲ್ಲ. ಇಂತಹ ಶಿಬಿರಗಳಿಂದ ಸಂಗ್ರಹವಾದ ರಕ್ತ ಎಷ್ಟೋ ತುರ್ತು ಸನ್ನಿವೇಶದ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದರ ಜೊತೆಗೆ ಸಮಾಜ ಮುಖಿ ಚಿಂತನೆಗಳನ್ನು ನಿರಂತರವಾಗಿ ಬೆಳೆಸುತ್ತಿದೆ. ಈಗಾಗಲೇ ಅನೇಕ ಶಿಬಿರಗಳನ್ನು ಕಾಲೇಜು ಆಯೋಜಿಸಿಕೊಂಡು ಬಂದಿದೆ. ಇದರ ಭಾಗವಾಗಿ ಈ ಬೃಹತ್ ರಕ್ತದಾನ ಶಿಬಿರವು ಒಂದು. ಇದಕ್ಕೆ ಹಲವು ಸಂಘ ಸಂಸ್ಥೆಗಳು ಸಹಕಾರ ನೀಡಿದೆ. ಈ ರಕ್ತದಾನ ನೂರಾರು ಜನರ ಆರೋಗ್ಯವನ್ನು ಬದುಕಿಸಲು ಉಪಯೋಗವಾಗಲಿದೆ. ಇಂತಹ ಸಾಮಾಜಮುಖಿ ಕಾರ್ಯಗಳು ಸಮಾಜಕ್ಕೆ ಮಾದರಿಯಾಗಬೇಕು. ರಕ್ತದಾನ ಶ್ರೇಷ್ಠ ದಾನ ಮತ್ತು ಅನೇಕರ ಬದುಕಿಗೆ ಜೀವ ತುಂಬುವ ಮಹಾ ದಾನ ಎಂದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ. ಮಾಲಿನಿ ಅಂಚನ್ ಕಾರ್ಯಕ್ರಮವನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪ್ರತೀ ವರ್ಷ ವರ್ಷಕ್ಕೆ ಎರಡು ಬಾರಿ ಸಂಘ ಸಂಸ್ಥೆಗಳ ಸಹಕಾರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ವಿಶೇಷವಾಗಿ ಶಿಬಿರದಲ್ಲಿ 230 ರಿಂದ 250 ಯುನಿಟ್ ರಕ್ತದ ವರೆಗೆ ವಿದ್ಯಾರ್ಥಿಗಳಿಂದ ಸಂಗ್ರಹಿಸಿ ರಕ್ತ ಸಂಗ್ರಹಣ ಕೇಂದ್ರಗಳಿಗೆ ಕಳಿಸಿಕೊಡುವಂತಹ ಮಹತ್ತರ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.

ಈ ವೇಳೆ ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಆಫಿಸರ್ ಡಾ. ವಿದ್ವತಾ ಮಾತನಾಡಿ, ರಕ್ತದಾನದಿಂದ ಯಾವುದೇ ಆರೋಗ್ಯದ ನಷ್ಟ ಇಲ್ಲ. ಒಂದು ಯುನಿಟ್ ರಕ್ತದಿಂದ ಅಗತ್ಯತೆ ಇದ್ದ ಮೂರು ಜನರನ್ನು ಬದುಕಿಸುವ ಶಕ್ತಿ ಇರುತ್ತದೆ ಎಂದು ಶಿಬಿರವನ್ನು ಆಯೋಜಿಸಿದ ಉಜಿರೆಯ ಎಸ್.ಡಿ.ಎಂ ಕಾಲೇಜಿಗೆ ಅಭಿನಂದನೆಯನ್ನು ತಿಳಿಸಿದರು. ಬಳಿಕೆ ಕಾಲೇಜಿನ ಪ್ರಾಂಶುಪಾಲ ಪ್ರೋ ವಿಶ್ವನಾಥ್ ಪಿ ರವರಿಗೆ ಕೆ.ಎಂ.ಸಿ ಆಸ್ಪತ್ರೆಯ ಅಭಿನಂದಾನ ಸ್ಮರಣಿಕೆಯನ್ನು ಹಸ್ತಾಂತರಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಬೆಳ್ತಂಗಡಿ ಫೆಡರಲ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಸುಹಾಸ್ ಕುಮಾರ್ ಬಿ, ಯೋಜನಾಧಿಕಾರಿ ಡಾ. ಸುಧೀರ್ ಕೆ ವಿ, ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಲ್ಯಾಬ್ ಟೆಕ್ನೀಷಿಯನ್ ಮೀನಾಕ್ಷಿ ರಮೇಶ್, ಹಿರಿಯ ಯೋಜನಾಧಿಕಾರಿ ಡಾ. ಮಹೇಶ್ ಶೆಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಕಾಲೇಜಿನ ನೂರಾರು ವಿದ್ಯಾರ್ಥಿಗಳು ರಕ್ತದಾನ ಶಿಬಿರದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಎನ್.ಎಸ್.ಎಸ್ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಹರ್ಷಿತಾ ನಿರೂಪಿಸಿ, ರೆಡ್ ಕ್ರಾಸ್ ವಿಭಾಗದ ಉಪನ್ಯಾಸಕಿ ಮಂಜುಶ್ರೀ ವಂದಿಸಿದರು.

ದಾಖಲೆಯ 220 ಯುನಿಟ್ ರಕ್ತ ಸಂಗ್ರಹ :

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿದರು. ಶಿಬಿರದಲ್ಲಿ ದಾಖಲೆಯ 220 ಯುನಿಟ್ ರಕ್ತ ಸಂಗ್ರಹ ಮಾಡಿ ಮಂಗಳೂರಿನ ಅತ್ತಾವರದ ಕೆಎಂಸಿ ಆಸ್ಪತ್ರೆಯ ರಕ್ತ ಸಂಗ್ರಹಣ ಘಟಕ ಹಾಗೂ ಮಂಗಳೂರು ವಿಭಾಗದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಗೆ ಕಳುಹಿಸಿಕೊಡಲಾಯಿತು.

Related posts

ಬಳಂಜ ಸ.ಉ. ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ತಾಯಿಗೊಂದು ಗಿಡ ನೆಡುವ ಕಾರ್ಯಕ್ರಮ

Suddi Udaya

ಶಿಶಿಲ ಶ್ರೀಕ್ಷೇತ್ರ ಚಂದ್ರಪರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಜಿನಮಂದಿರದ ಆಡಳಿತ ಮಂಡಳಿಯಿಂದ ಭಕ್ತಿ ಕಾಣಿಕೆ ಸಮರ್ಪಣೆ

Suddi Udaya

ಗುರುವಾಯನಕೆರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ಸಹಕಾರ ಭಾರತಿಗೆ ಜಯ

Suddi Udaya

ಗೇರುಕಟ್ಟೆ : ಪರಪ್ಪು ಜುಮ್ಮಾ ಮಸೀದಿಯಲ್ಲಿ ನಡೆಯುವ ಈದ್ ಮಿಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಜಿ ಡಿ ಅಶ್ರಫ್ ಆಯ್ಕೆ

Suddi Udaya

ಸಿಯೋನ್ ಆಶ್ರಮದಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ವೃತ್ತಿಪರ ತರಬೇತಿ ಕಾರ್ಯಾಗಾರ

Suddi Udaya
error: Content is protected !!