29.9 C
ಪುತ್ತೂರು, ಬೆಳ್ತಂಗಡಿ
August 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್‌.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ : ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ (ಎಸ್‌ಡಿಎಂಐಟಿ) ಕಲಿಕಾ ಸಂಪನ್ಮೂಲ ಕೇಂದ್ರದ ವತಿಯಿಂದ ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನದ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ಹಾಗೂ ಗ್ರಂಥಾಲಯ ಬಳಕೆಯ ಮಹತ್ವದ ಅರಿವು ಮೂಡಿಸುವ ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಎಸ್‌.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಸಂದೀಪ್ ಆರ್. ಉದ್ಘಾಟಿಸಿ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಮಾಹಿತಿಯ ಲಭ್ಯತೆ ಹೆಚ್ಚಾಗಿದ್ದರೂ ಪುಸ್ತಕಗಳ ಓದು ಮತ್ತು ಗ್ರಂಥಾಲಯಗಳ ಮಹತ್ವ ಕಡಿಮೆಯಾಗಿಲ್ಲ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗದೆ ವಿವಿಧ ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ವ್ಯಕ್ತಿತ್ವ ವಿಕಸನ ಹಾಗೂ ಸಮಕಾಲೀನ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಗ್ರಂಥಾಲಯವು ಕೇವಲ ಪುಸ್ತಕಗಳ ಸಂಗ್ರಹಾಲಯವಲ್ಲ, ಅದು ಜ್ಞಾನ, ಸಂಶೋಧನೆ ಮತ್ತು ಸೃಜನಶೀಲತೆಯ ಕೇಂದ್ರವಾಗಿದ್ದು, ವಿದ್ಯಾರ್ಥಿಗಳು ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಎಸ್‌ಡಿಎಂಐಟಿ ಗ್ರಂಥಪಾಲಕರಾದ ಡಾ. ರಜತಾ ಪಿ. ಶೆಟ್ಟಿ ಅವರು ಸ್ವಾಗತ ಭಾಷಣ ಮಾಡಿ, ಡಾ. ಎಸ್. ಆರ್. ರಂಗನಾಥನ್ ಅವರ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸಿದರು. ಭಾರತೀಯ ಗ್ರಂಥಾಲಯ ವ್ಯವಸ್ಥೆಯ ಅಭಿವೃದ್ಧಿಗೆ ಅವರು ನೀಡಿದ ಅಪೂರ್ವ ಕೊಡುಗೆಗಳನ್ನು ಸ್ಮರಿಸಿ, “ಪುಸ್ತಕಗಳು ಬಳಕೆಗೆ”, “ಪ್ರತಿಯೊಬ್ಬ ಓದುಗರಿಗೂ ಅವರ ಪುಸ್ತಕ” ಮತ್ತು “ಸಮಯ ಉಳಿಸುವ ಗ್ರಂಥಾಲಯ ಸೇವೆ” ಸೇರಿದಂತೆ ಅವರ ಪ್ರಸಿದ್ಧ ಐದು ಗ್ರಂಥಾಲಯ ನಿಯಮಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಹಾಗೂ ಜೀವಮಾನಪೂರ್ತಿ ಕಲಿಕೆಯ ಪ್ರಕ್ರಿಯೆಯನ್ನು ಉತ್ತೇಜಿಸುವಲ್ಲಿ ಗ್ರಂಥಾಲಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಿವಿಧ ಅಂಗ ಸಂಸ್ಥೆಗಳ ಗ್ರಂಥಪಾಲಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯ ಮಹತ್ವವನ್ನು ಸ್ಮರಿಸಿದರು.

ರೀಡಥಾನ್ ವಿಶೇಷ ಕಾರ್ಯಕ್ರಮ :

ದಿನಾಚರಣೆಯ ವಿಶೇಷ ಅಂಗವಾಗಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ‘ರೀಡಥಾನ್’ (READATHON) ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ವಿವಿಧ ಪ್ರಕಾರದ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ಓದಿದರು. ನಂತರ ಅವರು ಓದಿದ ಪುಸ್ತಕಗಳ ಕುರಿತು ತಮ್ಮ ಅನಿಸಿಕೆಗಳು, ಕಲಿತ ಪಾಠಗಳು ಹಾಗೂ ಪ್ರಮುಖ ಅಂಶಗಳನ್ನು ಸಹಪಾಠಿಗಳ ಮುಂದೆ ಸಂಕ್ಷಿಪ್ತವಾಗಿ ಮಂಡಿಸಿದರು. ಇದಕ್ಕಾಗಿ ಆಯ್ದ ಪುಸ್ತಕಗಳನ್ನು ಪ್ರತ್ಯೇಕವಾಗಿ ಪ್ರದರ್ಶಿಸಲಾಗಿದ್ದು, ವಿದ್ಯಾರ್ಥಿಗಳಿಗೆ ವಿವಿಧ ಸಾಹಿತ್ಯ ಮತ್ತು ಜ್ಞಾನ ಸಂಪನ್ಮೂಲಗಳ ಪರಿಚಯ ಮಾಡಿಕೊಡಲಾಯಿತು.

ರೀಡಥಾನ್ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಗ್ರಹಿಕೆ ಸಾಮರ್ಥ್ಯ, ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣಾತ್ಮಕ ಕೌಶಲ್ಯ ಹಾಗೂ ಪರಿಣಾಮಕಾರಿ ಸಂವಹನ ಸಾಮರ್ಥ್ಯಗಳನ್ನು ವೃದ್ಧಿಸಲು ನೆರವಾಯಿತು. ವಿದ್ಯಾರ್ಥಿಗಳು ತಮ್ಮ ಓದುವ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಜ್ಞಾನ ವಿನಿಮಯಕ್ಕೆ ವೇದಿಕೆಯಾಗಿದ್ದು, ಪುಸ್ತಕಗಳ ಮೂಲಕ ವ್ಯಕ್ತಿತ್ವ ವಿಕಸನ ಮತ್ತು ಸೃಜನಾತ್ಮಕ ಚಿಂತನೆಗೆ ಪ್ರೇರಣೆ ದೊರೆಯಿತು.

Related posts

ಚಾರಣಕ್ಕೆ ಮೊಬೈಲ್ ಆ್ಯಪ್, ಗೈಡ್ ಕಡ್ಡಾಯ-ಚಾರಣಿಗರ ಸುರಕ್ಷತೆಗೆ ಮಾರ್ಗದರ್ಶಿ ಬಿಡುಗಡೆ

Suddi Udaya

ಬೆಳ್ತಂಗಡಿ : ಲಾರಿ- ಬೈಕ್ ಅಪಘಾತದಲ್ಲಿ ಇಬ್ಬರು ಸಾವು ಪ್ರಕರಣ: ಬೆಳ್ತಂಗಡಿ ನ್ಯಾಯಾಲಯದಿಂದ ಲಾರಿ ಚಾಲಕನಿಗೆ ದಂಡ ಹಾಗೂ ಜೈಲು ಶಿಕ್ಷೆ ಪ್ರಕಟ

Suddi Udaya

ಅಪಘಾತದಲ್ಲಿ ಮೃತಪಟ್ಟ ಪದ್ಮುಂಜ ಸಿಎ ಬ್ಯಾಂಕ್ ಸಿಬ್ಬಂದಿ ಚಿದಾನಂದ ಗೌಡರಿಗೆ ಸಾರ್ವಜನಿಕರಿಂದ ಅಂತಿಮ ನಮನ

Suddi Udaya

ಮಾ.14-19: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿಯ ಷಷ್ಠಿ ಮಹೋತ್ಸವ: ಸ್ವರ್ಣ ಅಟ್ಟೆ ಪ್ರಭಾವಳಿ ಸಮರ್ಪಣೆ

Suddi Udaya

ನಾಳ ದೇವಸ್ಥಾನದಲ್ಲಿ ಯಕ್ಷಗಾನ ಬಯಲಾಟ

Suddi Udaya
error: Content is protected !!