30.2 C
ಪುತ್ತೂರು, ಬೆಳ್ತಂಗಡಿ
September 12, 2026
Uncategorizedಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಎಸ್‌ಡಿಎಂ ಆರೋಹಂ-2026 ಸಮಾರೋಪ ಸಮಾರಂಭ

ಉಜಿರೆ: ಸ್ಪರ್ಧೆಗಳಲ್ಲಿ ಸೋಲು ಗೆಲುವು ಸಹಜ, ಎರಡನ್ನೂ ಸಮಾನವಾಗಿ ಸ್ವೀಕರಿಸಿ ಮುನ್ನಡೆಯಬೇಕು. ಆಗ ಮಾತ್ರ ತಮ್ಮ ಕನಸಿನ ದಡ ಮುಟ್ಟಲು ಸಾಧ್ಯ. “ಎಸ್ ಡಿ ಎಂ ಆರೋಹಂ 2026” ಸ್ಪರ್ಧೆಗಳಲ್ಲಿ ನೀವು ಗಳಿಸಿದ ಅನುಭವ ನಿಮ್ಮ ಪ್ರಾಯೋಗಿಕ ಕಲಿಕಗೆ ಸಹಕಾರಿಯಾಗುತ್ತದೆ. ಹಾಗಾಗಿ ಈ ರೀತಿಯ ಸ್ಪರ್ಧೆಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್‌ ತಿಳಿಸಿದರು.

ಅವರು ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಸೆ.11 ರಂದು ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಬ್ಬ ಎಸ್‌ಡಿಎಂ ಆರೋಹಂ 2026 ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪಠ್ಯ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳು ತಂಡವಾಗಿ ಕೆಲಸ ಮಾಡಿ ಸೃಜನಶೀಲತೆ, ಮತ್ತು ಚಿಂತನೆಯ ಕೌಶಲಗಳನ್ನು ಬೆಳೆಸಿಕೊಳ್ಳುವುದು ಅಗತ್ಯ. ಹಾಗಾಗಿ ಭಿನ್ನ ಪ್ರತಿಭೆಯುಳ್ಳ ವಿದ್ಯಾರ್ಥಿಗಳನ್ನು ಒಂದೇ ಸೂರಿನಡಿ ಸೇರಿಸುವ ಕೆಲಸವನ್ನು “ಎಸ್‌ಡಿಎಂ ಆರೋಹಂ 2026” ತುಂಬಾ ಯಶಸ್ವಿಯಾಗಿ ಮಾಡಿದೆ ಎಂದರು.

ವಿವಿಧ ಕಾಲೇಜಿನಿಂದ ಉತ್ಸವಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳು ಎಸ್‌ಡಿಎಂ ಆರೋಹಂ 2026 ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಾ, ಎರಡು ದಿನಗಳ ಕಾಲ ಇಲ್ಲಿ ನಡೆದ ಕಾರ್ಯಕ್ರಮಗಳ ವ್ಯವಸ್ಥೆ ಮತ್ತು ಆಯೋಜನೆಯ ಸ್ವರೂಪ ಉತ್ತಮವಾಗಿತ್ತು. ನಮ್ಮ ಸೃಜನಶೀಲತೆಗೆ ಇಲ್ಲಿನ ಎಲ್ಲಾ ಸ್ಪರ್ಧೆಗಳು ವೇದಿಕೆಯಾಗಿದ್ದವು ಎಂದರು.

“ಎಸ್‌ಡಿಎಂ ಆರೋಹಂ-2026″ರ ಚಾಂಪಿಯನ್ಸ್‌ ಆಗಿ ಪದವಿ ವಿಭಾಗದಿಂದ ಮಂಗಳೂರಿನ ಕೊಡಿಯಾಲ್‌ಬೈಲ್‌ನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್‌ ಆಫ್‌ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌, ಪಿಯು ವಿಭಾಗದಿಂದ ಮೂಡಬಿದಿರೆಯ ಆಳ್ವಾಸ್‌ ಪಿಯು ಕಾಲೇಜು ಹೊರಹೊಮ್ಮಿದವು. ಇತ್ತ ರನ್ನರ್ಸ್‌ ಆಗಿ ಪದವಿ ವಿಭಾಗದಿಂದ ಮಂಗಳೂರಿನ ಹಂಪನಕಟ್ಟೆಯ ಶ್ರೀನಿವಾಸ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಷನ್‌ ಆಫ್‌ ಏವಿಯೇಷನ್‌ ಮತ್ತು ಪಿಯು ವಿಭಾಗದಿಂದ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜುಗಳು ಬಹುಮಾನ ಪಡೆದವು.

ಇದೇ ಸಂದರ್ಭದಲ್ಲಿ ಎಸ್‌ಡಿಎಂ ಆರೋಹಂ ಉತ್ಸವದ ಭಾಗವಾಗಿ ಆಯೋಜಿಸಿದ್ದ ಒಟ್ಟು 23 ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಎರಡು ದಿನಗಳ ಕಾಲ ಜರುಗಿದ ಈ ರಾಷ್ಟ್ರೀಯ ಮತ್ತು ಶೈಕ್ಷಣಿಕ ಹಬ್ಬದಲ್ಲಿ ಒಟ್ಟು 37 ಕಾಲೇಜುಗಳಿಂದ 1350ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭಾಗವಹಿಸಿದ್ದರು.

ವೇದಿಕೆಯಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್‌, ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ ಪಿ, ಉಪಪ್ರಾಂಶುಪಾಲೆ ನಂದಕುಮಾರಿ, ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ಡೀನ್‌ಗಳು, ವಿಭಾಗ ಮುಖ್ಯಸ್ಥರು, ಅಧ್ಯಾಪಕರು ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಕಾಲೇಜಿನ ಪರೀಕ್ಷಾಂಗ ಕುಲಸಚಿವ ಗಣೇಶ್‌ ನಾಯಕ್‌ ಸ್ವಾಗತಿಸಿ, ಕಾರ್ಯಕ್ರಮ ಸಂಚಾಲಕ ಲಕ್ಷ್ಮೀನಾರಾಯಣ ವಂದಿಸಿ ಹಾಗೂ ಅಧ್ಯಾಪಕ ದೀಕ್ಷಿತ್‌ ರೈ ನಿರೂಪಿಸಿದರು.

Related posts

ಕಾಪಿನಡ್ಕದಲ್ಲಿ ಗೆಳೆಯರ ಬಳಗದಿಂದ ಶ್ರೀ ಕೃಷ್ಣಾಷ್ಟಮಿ‌ ಸಂಭ್ರಮ : ಸಾಧಕರಿಗೆ ಸನ್ಮಾನ, ಶಾಲೆಗೆ ಗೊದ್ರೇಜ್ ಹಸ್ತಾಂತರ, ಕ್ರೀಡಾಕೂಟ

Suddi Udaya

ಗೇರುಕಟ್ಟೆ: ಮಾಜಿ ಶಾಸಕ ದಿ|ವಸಂತ ಬಂಗೇರರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ: 11 ನೇ ಗುರುತು ಮಾಡಿದ ಜಾಗದಲ್ಲಿ ಸಿಗದ ಅವಶೇಷಗಳು

Suddi Udaya

ಫೇಸ್‌ ಬುಕ್‌ ಆಪ್‌ ನಲ್ಲಿ ಲೋನ್ ಕೊಡುವುದಾಗಿ ನಂಬಿಸಿದ ಅಪರಿಚಿತ ವ್ಯಕ್ತಿ: ತೆಂಕಕಾರಂದೂರು ನಿವಾಸಿ ನೆಬಿಸಾರಿಗೆ ರೂ.96,743 ವಂಚನೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ: ಕುಣಿತ‌ ಭಜನಾ ತರಬೇತುದಾರರ ‌ತಂಡದ‌ “ಭಜೋರೆ‌ ಮಾರುತಿ‌” ನೂತನ‌‌ ಲಾಂಚನ ಬಿಡುಗಡೆ

Suddi Udaya
error: Content is protected !!