ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ 42ನೇ ವಾರ್ಷಿಕ ಸಾಮಾನ್ಯ ಸಭೆಯು ಸೆ.20ರಂದು ಸಂಘದ ಅಧ್ಯಕ್ಷ ಪಿ. ಜಯರಾಜ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಜಯರಾಜ್ ಹೆಗ್ಡೆ ಮಾತನಾಡಿ ಸಂಘವು ರೂ. 60,29,784.71 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.75 ಬೋನಸ್ ಹಾಗೂ ಶೇ.20 ಡಿವಿಡೆಂಟ್ ನೀಡಲಾಗಿದೆ. ಈ ವೇಳೆ ಅತಿ ಹೆಚ್ಚು ಬೋನಸ್ ಹಾಗೂ ಡಿವಿಡೆಂಟ್ ನೀಡಲು ಕಾರಣರಾದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಸಂಘದ ಸದಸ್ಯರ ಮಕ್ಕಳಿಗೆ 10ನೇ ತರಗತಿಯಿಂದ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಸಕ್ರಿಯ ಸದಸ್ಯರಿಗೆ ಸಂಘದ ಕ್ಷೇಮನಿಧಿಯಿಂದ 6 ಮಂದಿಗೆ ಚೆಕ್ ವಿತರಣೆ ಅತೀ ಹೆಚ್ಚು ಹಾಲು ಪೂರೈಸಿದ 10 ಮಂದಿಗೆ ಗೌರವಾರ್ಪಣೆ ಹಾಗೂ 2025-26ನೇ ಸಾಲಿನಲ್ಲಿ 1000 ಲೀಟರ್ ಗಿಂತ ಹೆಚ್ಚು ಹಾಲು ಪೂರೈಸಿದ ಸುಮಾರು 32 ಮಂದಿಗೆ ಮಹಾಸಭೆಯಲ್ಲಿ ಗುರುತಿಸಿ ಗೌರವಿಸಲಾಯಿತು.
ಸಂಘದ ಸದಸ್ಯರಾದ ಸೇಸಪ್ಪ ಸಾಲಿಯಾನ್ ಮಾತನಾಡಿ ಹಾಲಿನ ದರ ರೂ. 60 ಕ್ಕೆ ಏರಿಸಬೇಕೆಂದು ಎಲ್ಲಾ ಸದಸ್ಯರು ನಂದಿನಿ ಪಶು ಆಹಾರವನ್ನೇ ಬಳಸಬೇಕೆಂದು ಆಗ್ರಹಿಸಿದರು. ನಂದಿನಿ ಪಶು ಆಹಾರ ಬಳಸದೇ ಇರುವ ಸದಸ್ಯರಿಗೆ ಸಂಘದಿಂದ ಯಾವುದೇ ಅನುದಾನ ನೀಡಬಾರದೆಂದು ಮಹಾಸಭೆಯಲ್ಲಿ ತೀರ್ಮಾನಿಸಲಾಯಿತು.
ದ.ಕ ಒಕ್ಕೂಟದ ಪುತ್ತೂರು ವಿಭಾಗದ ಉಪವ್ಯವಸ್ಥಾಪಕ ಡಾ. ಡಿ.ಆರ್ ಸತೀಶ್ ರಾವ್ ಭಾಗವಹಿಸಿ ಗುಣಮಟ್ಟದ ಹಾಲು ಮತ್ತು ಆಧುನಿಕ ಹೈನುಗಾರಿಕೆ ಬಗ್ಗೆ ವಿವರಿಸಿದರು. ಒಕ್ಕೂಟದ ಪಶುವೈದ್ಯಕೀಯ ಸೇವೆಯ ಸಹಾಯಕ ವ್ಯವಸ್ಥಾಪಕ ಡಾ. ಜಿತೇಂದ್ರ ಪ್ರಸಾದ್ ಮಾತನಾಡಿ ಇನ್ಸೂರೆನ್ಸ್ ಹಾಗೂ ಪಶು ವೈದ್ಯಕೀಯ ಸೇವೆಗಳ ಬಗ್ಗೆ ವಿವರಿಸಿದರು. ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ ಪಶು ಆಹಾರದ ಗುಣಮಟ್ಟ ಹಾಗೂ ಒಕ್ಕೂಟದಿಂದ ದೊರೆಯುವ ಸವಲತ್ತುಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಸಂಘದ ಎಲ್ಲಾ ನಿರ್ದೇಶಕ ಹಾಗೂ ಸಿಬ್ಬಂದಿಗಳು ಭಾಗವಹಿಸಿದರು. ಉಪಾಧ್ಯಕ್ಷ ಪಿ ಜನಾರ್ದನ ಗೌಡ ಸ್ವಾಗತಿಸಿ, ಕಾರ್ಯದರ್ಶಿ ಜಯರಾಜ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕ ಕೃಷ್ಣಪ್ಪ ಪೂಜಾರಿ ವಂದಿಸಿದರು.











