ಮಚ್ಚಿನ: ಇಲ್ಲಿಯ ಬಸ್ ನಿಲ್ದಾಣಗಳು ದುಸ್ಥಿತಿಗೆ ತಲುಪಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪ್ರತಿನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ. ಬಿಸಿಲು, ಗಾಳಿ, ಮಳೆ, ಗುಡುಗು-ಮಿಂಚಿನ ನಡುವೆಯೂ ಸುರಕ್ಷಿತವಾಗಿ ನಿಂತುಕೊಳ್ಳಲು ವ್ಯವಸ್ಥೆಯಿಲ್ಲದೆ ರಸ್ತೆ ಬದಿಯಲ್ಲೇ ಬಸ್ಸಿಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣಗಳಿದ್ದರೂ ಅವು ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.

ಮಡಂತ್ಯಾರ್ನಿಂದ ಉಪ್ಪಿನಂಗಡಿವರೆಗಿನ ರಸ್ತೆಯಲ್ಲಿ ಸಾಲುಸಾಲಾಗಿ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ನಿಲ್ದಾಣಗಳ ಪಕ್ಕದಲ್ಲಿರುವ ಹೊಂಡಗಳಲ್ಲಿ ಮಳೆನೀರು ತುಂಬಿ ಕೆಸರು ಉಂಟಾಗುತ್ತಿದ್ದು, ಪ್ರಯಾಣಿಕರು ಕೆಸರಿನಲ್ಲೇ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.

ಮಚ್ಚಿನ ಗ್ರಾಮದ ಬಂಗೇರುಕಟ್ಟೆ ಬಸ್ ನಿಲ್ದಾಣ ರಸ್ತೆಯ ಮಟ್ಟಕ್ಕಿಂತ ಎತ್ತರದಲ್ಲಿದ್ದು, ಪ್ರಯಾಣಿಕರು ಹತ್ತಿ ಇಳಿಯಲು ಪರದಾಡುವಂತಾಗಿದೆ. ಬಸ್ಸಿಗಾಗಿ ಕಾಯಲು ನಿಲ್ದಾಣಕ್ಕೆ ಹತ್ತಿ, ಬಸ್ ಬರುವ ಸಮಯದಲ್ಲಿ ಕೆಳಗಿಳಿಯುವಷ್ಟರಲ್ಲಿ ಬಸ್ ಮಡಂತ್ಯಾರ್ ತಲುಪಿರುತ್ತದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕಾರಂದೂರು ಬಸ್ ನಿಲ್ದಾಣದ ಒಳಗೆ ರಸ್ತೆ ನೀರು ನುಗ್ಗಿ ಕೆಸರು ತುಂಬಿಕೊಂಡಿದೆ. ಇದರಿಂದ ಪಾಲಡ್ಕ ಹಾಗೂ ತಾರೆಮಾರು ಕಡೆಯಿಂದ ಪ್ರತಿನಿತ್ಯ ಬರುವ ವಿದ್ಯಾರ್ಥಿಗಳು ಬಸ್ ನಿಲ್ದಾಣದೊಳಗೆ ನಿಲ್ಲಲು ಸಾಧ್ಯವಾಗದೆ ರಸ್ತೆ ಬದಿಯಲ್ಲೇ ಕಾಯುವಂತಾಗಿದೆ. ಒಂದೆಡೆ ವಾಹನಗಳ ನಿರಂತರ ಓಡಾಟ, ಮತ್ತೊಂದೆಡೆ ಅಪಘಾತದ ಭೀತಿ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಈ ರಸ್ತೆಯಲ್ಲಿ ಅಧಿಕಾರಿಗಳು ಪ್ರತಿನಿತ್ಯ ಸಂಚರಿಸಿದರೂ ಸಮಸ್ಯೆ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಕಾರಂದೂರಿನ ಅಪಾಯಕಾರಿ ಬಸ್ ನಿಲ್ದಾಣವನ್ನು ತೆರವುಗೊಳಿಸಿ, ಸುರಕ್ಷಿತ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒಳಗೊಂಡ ಹೊಸ ಬಸ್ ನಿಲ್ದಾಣ ನಿರ್ಮಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ನೆರೋಳ್ ಪಲ್ಕೆ ಬಸ್ ನಿಲ್ದಾಣ ಗಿಡಗಂಟಿ ಹಾಗೂ ಪೊದೆಗಳಿಂದ ಆವೃತವಾಗಿ ಮರೆಯಾಗುವ ಸ್ಥಿತಿಗೆ ತಲುಪಿದೆ. ಕುದ್ರಡ್ಕ ಬಸ್ ನಿಲ್ದಾಣದಲ್ಲಿಯೂ ಅಗತ್ಯ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಕಸದ ರಾಶಿಯಿಂದಾಗಿ ಪ್ರಯಾಣಿಕರು ಒಳಗಡೆ ನಿಂತುಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಚ್ಚಿನ ಗ್ರಾಮದ ಎಲ್ಲಾ ಬಸ್ ನಿಲ್ದಾಣಗಳಿಗೆ ಮರುಜೀವ ತುಂಬಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಅಭಿವೃದ್ಧಿಪಡಿಸಬೇಕು. ಅಪಾಯಕಾರಿ ನಿಲ್ದಾಣಗಳನ್ನು ತೆರವುಗೊಳಿಸಿ ಸುರಕ್ಷಿತ ಹಾಗೂ ಸುಂದರ ಬಸ್ ನಿಲ್ದಾಣಗಳನ್ನು ನಿರ್ಮಿಸಬೇಕು. ಬಿಸಿಲು, ಗಾಳಿ ಮತ್ತು ಮಳೆಯಿಂದ ರಕ್ಷಣೆ ಪಡೆಯಲು ಅಗತ್ಯ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ರಸ್ತೆ ಹೊಂಡಗಳನ್ನು ಮುಚ್ಚಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ವರದಿ: ಹರ್ಷ ಬಳ್ಳಮಂಜ












