ಬೆಳ್ತಂಗಡಿ: “ಮಹಾಪುರುಷರ ಸ್ಮರಣೆಯು ಕೇವಲ ಆಚರಣೆಗೆ ಸೀಮಿತವಾಗದೆ, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು” ಎಂದು ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ (ಇಓ) ದಯಾವತಿ ಎಂ. ಅಭಿಪ್ರಾಯಪಟ್ಟರು.
ಇವರು ನ.27ರಂದು ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಕನಕದಾಸ ಜಯಂತಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. "ಕನ್ನಡ ಸಾಹಿತ್ಯ ಮತ್ತು ದಾಸ ಪರಂಪರೆಗೆ ಕನಕದಾಸರ ಕೊಡುಗೆ ಅಪಾರ. ಸುಮಾರು 250ಕ್ಕೂ ಹೆಚ್ಚು ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜ ಸುಧಾರಣೆ ಮಾಡಿದ್ದಾರೆ. ಭಕ್ತಿಯ ಮೂಲಕವೇ ದೇವರನ್ನು ಕಂಡ ಮಹಾನ್ ಸಂತ ಅವರು" ಎಂದು ಸ್ಮರಿಸಿದರು.
ಇಂದಿನ ಮಕ್ಕಳಿಗೆ ಕಿವಿಮಾತು ಹೇಳಿದ ಅವರು, "ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ರೀಲ್ಸ್’ ವ್ಯಾಮೋಹಕ್ಕೆ ಬಲಿಯಾಗದೆ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಅರ್ಥೈಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ಮಲ್ಲಪ್ಪ ನಡುಗಡ್ಡಿ, ಆಹಾರ ಶಿರಸ್ತೇದಾರ್ ಸಂತೋಷ್, ಕಾರ್ಯದರ್ಶಿ ಮಂಜು ಕೆ.ಜಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ನಾಗವೇಣಿ, ಗ್ರಾಮ ಆಡಳಿತ ಅಧಿಕಾರಿ ಪರಮೇಶ್ವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಜೀವಿನಿ ವಲಯ ಮೇಲ್ವಿಚಾರಕ ಜಯಾನಂದ ಸ್ವಾಗತಿಸಿದರು. ಪಶುಸಂಗೋಪನಾ ಇಲಾಖೆಯ ರಾಜಶ್ರೀ ಕಾರ್ಯಕ್ರಮ ನಿರೂಪಿಸಿದರು.













