23.1 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್.ಡಿ.ಎಂ ಕಾಲೇಜಿನಲ್ಲಿ “ಎಸ್.ಡಿ.ಎಂ ನೆನಪಿನಂಗಳ” ಕಾರ್ಯಕ್ರಮ

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ (ರಿ.) ಉಜಿರೆ ವತಿಯಿಂದ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ “ಎಸ್.ಡಿ.ಎಂ ನೆನಪಿನಂಗಳ” ಕಾಲೇಜಿನ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ, ವಿದ್ಯಾರ್ಥಿ ವೇತನ ವಿತರಣೆ ಹಾಗು ಮಧ್ಯಾಹ್ನದ ಭೋಜನ ವ್ಯವಸ್ಥೆಗೆ ದೇಣಿಗೆ ಹಸ್ತಾಂತರ ಮತ್ತು ವೈದ್ಯಕೀಯ ಕ್ಷೇತ್ರದ ಹಿರಿಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿದ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಧಾರ್ಮಿಕ ಚಿಂತಕ ಡಾ. ಪ್ರದೀಪ್ ಆಟಿಕುಕ್ಕೆ ಮಾತನಾಡಿ, ವಿದ್ಯೆ ಮತ್ತು ಮೌಲ್ಯಗಳು ಈ ಸಮಾಜವನ್ನು ಸುಸಂಸ್ಕೃತವಾಗಿರಿಸುತ್ತದೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಹಲವು ದಶಕಗಳ ಹಿಂದೆಯೇ ಶಿಕ್ಷಣ ಕ್ರಾಂತಿಯನ್ನು ಬರೆದು ಇಂದು ನೂರಾರು ಸಾಧಕರನ್ನು ಈ ಸಮಾಜಕ್ಕೆ ನೀಡಿದೆ. ಪಠ್ಯದ ಜೊತೆಗೆ ಜೀವನ ಶಿಕ್ಷಣವನ್ನು ಕಲಿಸಿ ಲಕ್ಷಾಂತರ ವಿದ್ಯಾರ್ಥಿಗಳು ಸುಭದ್ರವಾಗಿ ಬದುಕನ್ನು ಕಟ್ಟಿಕೊಳ್ಳಲು ಅಡಿಪಾಯ ರೂಪಿಸಿದೆ. ಕೈಗೆಟಕುವ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡಿ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ಸಾಮಾಜಿಕ ಚಿಂತನೆ ಮತ್ತು ದೂರದೃಷ್ಟಿತ್ವ ಇದ್ದಾಗ ಮಾತ್ರ ಇಂತಹ ಶಿಕ್ಷಣ ಸಂಸ್ಥೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಲು ಸಾಧ್ಯ.

ಸಾಧನೆಯ ಪ್ರೇರಣೆ ನಮ್ಮೊಳಗೆ ಮೂಡಬೇಕು. ಸಾಧನೆಗಳೆಡೆಗಿನ ತುಡಿತ ಮತ್ತು ಅದಕ್ಕಾಗಿ ಪ್ರತಿನಿತ್ಯದ ಪ್ರಯತ್ನ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಆ ಸಾಧನೆ ಹಂತ ಹಂತವಾಗಿ ಹೆಜ್ಜೆ ಹಾಕಿದಾಗ ಮಾತ್ರ ಸಾಧ್ಯ. ನಾವು ಎಷ್ಟೇ ಎತ್ತರಕ್ಕೇರಿದರೂ ಮನುಷ್ಯರಾಗಿ, ಮನುಷ್ಯತ್ವದಿಂದ ಬಾಳಬೇಕು. ಸಮಾಜಕ್ಕೆ ನಮ್ಮಿಂದಾಗುವ ಕೊಡುಗೆಯನ್ನು ನೀಡಬೇಕು. ಉದ್ದೇಶ ರಹಿತವಾದ ಜೀವನ ಶೂನ್ಯವೆನಿಸಿಕೊಳ್ಳುತ್ತದೆ. ಕಾಲೇಜು ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದೆ. ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಅವಕಾಶಗಳನ್ನು ಸಾಧನೆಯ ಮೆಟ್ಟಿಲಾಗಿ ರೂಪಿಸಿಕೊಳ್ಳಿ. ನಮ್ಮ ನಡೆ ನುಡಿ ನೋಟ ಬದ್ದತೆ, ಪ್ರೀತಿ ಮತ್ತು ಸಂಸ್ಕಾರದಿಂದ ಕೂಡಿರಲಿ ಎಂದರು.

ಪ್ರಧಾನ ಅಭ್ಯಾಗತರಾಗಿ ಉಪಸ್ಥಿತರಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳೇ ನಮ್ಮ ರಾಯಭಾರಿಗಳು. ಸಾಧನೆ ಎಂದರೆ ಕೇವಲ ಹಣ ಅಂತಸ್ತಿನ ಸಂಪಾದನೆ ಅಲ್ಲ ಬದಲಿಗೆ ಈ ಸಮಾಜಕ್ಕೆ ನಾವು ನೀಡುವ ಕೃತಜ್ಞಾಭಾವ, ಬೆಳೆಸಿದ ಸಂಘ ಸಂಸ್ಥೆಗಳ ಮೇಲಿನ ಪ್ರೀತಿ ಪ್ರಮುಖ ಎನಿಸಿಕೊಳ್ಳುತ್ತದೆ ಎಂದು ಹಿರಿಯ ವಿದ್ಯಾರ್ಥಿ ಸಂಘಕ್ಕೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಮತ್ತು ಕಾಲೇಜಿನ ವತಿಯಿಂದ ಕೃತಜ್ಞತೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗು ಮಂಗಳೂರಿನ ಹಿರಿಯ ವೈದ್ಯ ಯೂರಾಲಾಜಿಸ್ಟ್ ಡಾ ಸದಾನಂದ ಪೂಜಾರಿ ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಕಾಲೇಜು ದಿನಗಳಲ್ಲಿ ನೀಡಿದ ಅವಕಾಶ ಇಂದು ನನ್ನನ್ನು ದೆಹಲಿಯಂತಹ ವೇದಿಕೆಗಳಲ್ಲಿ ನೂರಾರು ಜನರ ಎದುರು ನಿಂತು ಮಾತನಾಡುವಂತೆ ಧೈರ್ಯ ತುಂಬಿದೆ. ಸಾಧಿಸುವ ಛಲ ಮತ್ತು ಯೋಗ್ಯತೆಯನ್ನು ಬೆಳೆಸಿಕೊಂಡಾಗ ಯಶಸ್ಸಿನ ಯೋಗ ನಮ್ಮದಾಗುತ್ತದೆ ಎಂದು ತನ್ನ ವೈದ್ಯ ವೃತ್ತಿಯ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ವೇದಿಕೆಯಲ್ಲಿ ವೈದ್ಯಕೀಯ ಕ್ಷೇತ್ರ ಸಾಧಕ ಹಿರಿಯ ವಿದ್ಯಾರ್ಥಿಗಳು ಸೇರಿದಂತೆ, ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಿರಿಯ ವಕೀಲ ಧನಂಜಯ್ ರಾವ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರವನ್ನು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಪ್ರೇರಣೆ ಬೇಕು. ಈ ಪ್ರೇರಣೆ ಸಾಧಕರ ಯಶೋಗಾಥೆಯಿಂದ ನಮಗೆ ಸಿಗುತ್ತವೆ. ವಿದ್ಯಾರ್ಥಿಗಳು ಇದರಿಂದ ಸ್ಪೂರ್ತಿ ಪಡೆಯಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ, ನಿವೃತ್ತ ವರಿಷ್ಠಾಧಿಕಾರಿ ಪೀತಾಂಬರ ಹೆರಾಜೆ ವಹಿಸಿದ್ದರು.

ಕಾರ್ಯಕ್ರಮದದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಉಜಿರೆಯ ಅಶೋಕ್ ಭಟ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ ಶಶಿಶೇಖರ್ ಕಾಕತ್ಕಾರ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಎಸ್.ಡಿ.ಎಂ ಕಾಲೇಜಿನ ಪ್ರಾಧ್ಯಾಪಕ ಡಾ. ದಿವಾ ಕೊಕ್ಕಡ ಹಾಗು ಸಹಾಯಕ ಪ್ರಾಧ್ಯಾಪಕ ದೀಕ್ಷಿತ್ ನಿರೂಪಿಸಿ, ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ, ಹಿರಿಯ ವಕೀಲ ಧನಂಜಯ್ ರಾವ್ ವಂದಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ ಪಿ ಶ್ರೀನಾಥ್ ಕಾರ್ಯಕ್ರಮ ಸಂಯೋಜಿಸಿದರು.

ವೈದ್ಯಕೀಯ ಕ್ಷೇತ್ರದ 10 ಜನ ಸಾಧಕರಿಗೆ ಸನ್ಮಾನ :

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ವಿಶೇಷ ಸಾಧಕರಾದ ಉಜಿರೆಯ ಶಕ್ತಿ ಕ್ಲಿನಿಕ್ ಡಾ. ಪ್ರಕಾಶ್ ಬಿ., ಉಪ್ಪಿನಂಗಡಿಯ ಗಿರಿಜಾ ಡೆಂಟಲ್ ಕ್ಲಿನಿಕ್ ಡಾ. ರಾಜಾರಾಮ ಕೆ. ಬಿ., ಉಜಿರೆಯ ದಂತ ಚಿಕಿತ್ಸಾಲಯದ ಡಾ. ಎಂ. ಎಂ. ದಯಾಕರ್, ಮಂಗಳೂರಿನ ಸೀನಿಯರ್ ಯೂರಾಲಾಜಿಸ್ಟ್ ಡಾ ಸದಾನಂದ ಪೂಜಾರಿ, ಗುರುವಾಯನಕೆರೆಯ ಅಭಯ ಹಾಸ್ಪಿಟಲ್ ಡಾ ಶ್ರೀಹರಿ, ನಾವೂರದ ಆರೋಗ್ಯ ಕ್ಲಿನಿಕ್ ಡಾ. ಪ್ರದೀಪ್ ಆಟಿಕುಕ್ಕೆ ,
ಬೆಳ್ತಂಗಡಿಯ ಗಣೇಶ್ ಮೆಡಿಕಲ್ ಕೇರ್ ಡಾ. ಶಶಿಕಾಂತ ಡೋಂಗ್ರೆ , ಉಜಿರೆಯ ಇ.ಎನ್.ಟಿ. ಸ್ಪೆಷಲಿಸ್ಟ್ ಡಾ
ರಂಜನ್ ಕುಮಾರ್ , ಮೂಡುಬಿದಿರೆಯ ಸುಷಾ ಡೆಂಟಲ್ ಕೇರ್ ಡಾ. ರೇಷ್ಮಾ ಮತ್ತು ಉಜಿರೆಯ ವಿನ್ಯಾಸ ದಂತ ಚಿಕಿತ್ಸಾಲಯದ ಡಾ. ಶ್ರೀಹರ್ಷರವರನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ವೈದ್ಯರುಗಳ ನಿಸ್ವಾರ್ಥ ಸೇವೆ ಮತ್ತು ಸಾಮಾಜಿಕ ಬದ್ಧತೆಯನ್ನು ಸ್ಮರಿಸಿ ಸನ್ಮಾನಿಸಿದರು. ತಾಯಿಯಿಂದ ಮಾತ್ರ ಇನ್ನೊಂದು ಜೀವವನ್ನು ನೀಡಲು ಸಾಧ್ಯ ಆದರೆ ಅಂತಹ ಜೀವಗಳನ್ನು ಕಾಪಾಡುವಂತ ಮಹತ್ವದ ಸೇವೆಯನ್ನು ವೈದ್ಯರುಗಳು ಮಾಡುತ್ತಾರೆ. ಈ ಸಾಧಕ ವೈದ್ಯರುಗಳು ಸಂಸ್ಥೆಯ ಅಸ್ತಿತ್ವಕ್ಕೆ ವಿಶೇಷ ಗೌರವವನ್ನು ತಂದಿದೆ ಎಂದರು.

20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ :

ಪ್ರಸಕ್ತ ಸಾಲಿನ ಎಸ್.ಡಿ.ಎಂ ಕಾಲೇಜಿನ 20 ಜನ ಅರ್ಹ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ತಲಾ 5 ಸಾವಿರದಂತೆ 1 ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡಿದರು. ಸನ್ಮಾನ ಸ್ವೀಕರಿಸಿದ ಸಾಧಕ ವೈದ್ಯರುಗಳು ವಿತರಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ, ಪೀತಾಂಬರ ಹೆರಾಜೆ, ಬಿ.ಕೆ ಧನಂಜಯ್ ರಾವ್ ಸೇರಿದಂತೆ ಇತರೆ ಅತಿಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳಾದ ಶ್ರದ್ಧಾ, ಸಂತೋಷಿ ಧನರಾಜ್ ಅಂಬ್ಳೇಕರ್ , ಚಂದನ ಡಿ, ಸಿಂಚನಾ , ದೀಕ್ಷಾ , ಪ್ರೀತಿಕಾ , ಹಯಾ ಫಾತಿಮಾ, ಭವ್ಯ, ಆಯಿಷತ್ ಶಿಫಾನಾ, ಪ್ರತೀಕ್ಷಾ, ಪವಿತ್ರಾ, ಕೆದಿಲ್ಯ ಶ್ರೀಪ್ರಜ್ಞಾ ರವೀಂದ್ರ, ನವ್ಯಾ ಪಿ ಭಟ್, ಸುದರ್ಶನ್ ಎಸ್, ಅಂಕಿತ ಎನ್, ತ್ರಿಶಾ, ಅಮೃತ, ತನುಶ್ರೀ ಸಿ.ಕೆ., ಬ್ರಿಜಿನ್ಯಾ ಮತ್ತು ಶಾಂಭವಿ ಹೆಚ್ ಬಿ ಪಡೆದುಕೊಂಡರು.

ಮಧ್ಯಾಹ್ನ ಭೋಜನ ವ್ಯವಸ್ಥೆಗೆ ದೇಣಿಗೆ ಹಸ್ತಾಂತರ :

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಕಾಲೇಜಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಅರ್ಹ 250 ವಿದ್ಯಾರ್ಥಿಗಳಿಗೆ 9 ಲಕ್ಷ ಮೌಲ್ಯದ ಬಿಸಿ ಊಟದ ಯೋಜನೆಗೆ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸಂಘದ ಅಧ್ಯಕ್ಷರಾದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಪೀತಾಂಬರ ಹೆರಾಜೆ, ಹಿರಿಯ ವಕೀಲ ಬಿ.ಕೆ ಧನಂಜಯ್ ರಾವ್ ಸೇರಿದಂತೆ ಇತರೆ ಸದಸ್ಯರು ತಲಾ 1 ಲಕ್ಷ ಮೊತ್ತದ ದೇಣಿಗೆಯನ್ನು ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಹಾಗು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ ಪಿ ರವರಿಗೆ ಹಸ್ತಾಂತರಿಸಲಾಯಿತು.

Related posts

ರಾಜ್ಯ ಸರ್ಕಾರಿ ನೌಕರರ ವಿವಿದ್ದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಜಯಕೀರ್ತಿಜೈನ್ ರಿಗೆ ಸನ್ಮಾನ

Suddi Udaya

ಜೆಸಿಐ ಮಡಂತ್ಯಾರಿಗೆ ಜೆಸಿಐ ಭಾರತದ ವಲಯ 15 ರ ಮಧ್ಯಂತರ ಸಮ್ಮೇಳನದಲ್ಲಿ ಪ್ರಶಸ್ತಿ

Suddi Udaya

ಬೆಳ್ತಂಗಡಿ ವಕೀಲರ ಸಂಘದಿಂದ ಸಚಿವ ಸತೀಶ್ ಜಾರಕಿಹೊಳಿ ಭೇಟಿ: ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆಗೆ ಆಹ್ವಾನ

Suddi Udaya

ಬಳಂಜ ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಪ್ಲೇಟ್ ಇಡುವ ಸ್ಟ್ಯಾಂಡ್ ಕೊಡುಗೆ

Suddi Udaya

ಉಜಿರೆ ಗ್ರಾಮ ಪಂಚಾಯತ್ ವತಿಯಿಂದ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya
error: Content is protected !!