ಉಜಿರೆ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಶಿಷ್ಟ ಪ್ರತಿಭೆ ಮತ್ತು ಸಾಮರ್ಥ್ಯ ಅಡಗಿರುತ್ತದೆ. ಅದನ್ನು ಗುರುತಿಸಿ, ಸೂಕ್ತ ವೇದಿಕೆಯಲ್ಲಿ ಪ್ರದರ್ಶಿಸಿ, ನಿರಂತರ ಪ್ರಯತ್ನದ ಮೂಲಕ ಮತ್ತಷ್ಟು ಎತ್ತರಕ್ಕೆ ಬೆಳೆಸುವುದು ಮುಖ್ಯ. ಪ್ರಸ್ತುತ ಕಾಲವು ಎಲ್ಲಾ ಕ್ಷೇತ್ರಗಳು ಸ್ಪರ್ಧೆಗಳಿಂದ ಕೂಡಿದ್ದು, ವಿದ್ಯಾರ್ಥಿಗಳು ಬಾಹ್ಯ ಸ್ಪರ್ಧೆಗಳಲ್ಲಿ ಯಶಸ್ಸು ಸಾಧಿಸುವುದರ ಜೊತೆಗೆ ತಮ್ಮೊಳಗಿನ ಮಿತಿಗಳನ್ನು ಮೀರಲು ಪ್ರಯತ್ನಿಸಬೇಕು. ನಿಜವಾದ ಗೆಲುವು ಎಂದರೆ ಇತರರನ್ನು ಸೋಲಿಸುವುದಷ್ಟೇ ಅಲ್ಲ; ಪ್ರತಿದಿನವೂ ನಿನ್ನೆಯಿಗಿಂತ ಉತ್ತಮರಾಗಲು ಶ್ರಮಿಸುವುದು. ಸ್ವಯಂ ಸುಧಾರಣೆ, ನಿರಂತರ ಕಲಿಕೆ, ಪರಿಶ್ರಮ ಮತ್ತು ಮೌಲ್ಯಾಧಾರಿತ ವ್ಯಕ್ತಿತ್ವವು ಯಶಸ್ಸಿನ ಪ್ರಮುಖ ಸಾಧನಗಳು ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅಭಿಪ್ರಾಯ ಪಟ್ಟರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (SDMIT) ‘Where Logic Meets Innovation’ ಎಂಬ ಆಶಯದೊಂದಿಗೆ ಪಿಯುಸಿ, ಡಿಪ್ಲೊಮಾ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ, ತಾಂತ್ರಿಕ ಕೌಶಲ್ಯ ಮತ್ತು ನವೀನ ಆಲೋಚನೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕಾಲೇಜಿನ ಹೊರಾಂಗಣದಲ್ಲಿ ಆಯೋಜಿಸಲಾದ ಎರಡು ದಿನಗಳ ರಾಜ್ಯಮಟ್ಟದ ತಾಂತ್ರಿಕ–ಸಾಂಸ್ಕೃತಿಕ ಸ್ಪರ್ಧೋತ್ಸವ ‘ಸ್ಪರ್ಧಮ್ 2026’ಉದ್ಘಾಟಿಸಿ ಮಾತನಾಡಿದರು.

ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ ತಮ್ಮ ಆಲೋಚನೆಗಳು, ಅಭಿಪ್ರಾಯಗಳು ಮತ್ತು ನವೀನ ಪರಿಕಲ್ಪನೆಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸುವುದರ ಜೊತೆಗೆ, ಇತರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ ಹೊಸ ಅನುಭವಗಳನ್ನು ಪಡೆಯಲು ಸಹಕಾರಿಯಾಗುತ್ತವೆ.
ಉತ್ತಮ ವ್ಯಕ್ತಿತ್ವ, ಪ್ರತಿಭೆ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಂಡ ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿಯೂ ಆತ್ಮವಿಶ್ವಾಸದಿಂದ ಸ್ಪರ್ಧಿಸಬಹುದು.
ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪ್ರದೇಶದಲ್ಲಿಯೇ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಅಗತ್ಯವಾದ ಸೌಲಭ್ಯಗಳು ಮತ್ತು ಅವಕಾಶಗಳನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ, ಜ್ಞಾನ ಮತ್ತು ಕೌಶಲ್ಯಗಳನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಆಶಿಸಿದರು. ‘ಸ್ಪರ್ಧಮ್ 2026’ರಲ್ಲಿ ಭಾಗವಹಿಸಿದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಧನ್ಯವಾದ ಸಲ್ಲಿಸಿ, ಈ ಸ್ಪರ್ಧೋತ್ಸವವು ಅವರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಮತ್ತಷ್ಟು ಬೆಳೆಸಲು ನೆರವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರಣ್ ವರ್ಮಾ ಅವರು, ‘ಸ್ಪರ್ಧಮ್ 2026’ ಅನ್ನು ಆಯೋಜಿಸಿದ ಸಂಘಟಕರನ್ನು ಅಭಿನಂದಿಸಿದರು. 25ಕ್ಕೂ ಅಧಿಕ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತಸದ ಸಂಗತಿಯಾಗಿದ್ದು, ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿ ತಮ್ಮ ಪ್ರತಿಭೆ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವ ಇಂತಹ ಕಾರ್ಯಕ್ರಮಗಳು ಉತ್ತಮ ಶೈಕ್ಷಣಿಕ ಸಂಸ್ಕೃತಿಯನ್ನು ಬೆಳೆಸುತ್ತವೆ.
ಶಿಕ್ಷಣವು ತರಗತಿಯ ನಾಲ್ಕು ಗೋಡೆಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳಿಗೆ ಹೊರಜಗತ್ತಿನ ಪ್ರಾಯೋಗಿಕ ಅನುಭವಗಳನ್ನೂ ಒದಗಿಸಬೇಕು. ತಂಡದೊಂದಿಗೆ ಕಾರ್ಯನಿರ್ವಹಿಸುವ ಕೌಶಲ್ಯ, ಸಂವಹನ ಸಾಮರ್ಥ್ಯ, ಹೊಸ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಗುಣ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಇಂತಹ ಸ್ಪರ್ಧೆಗಳು ನೆರವಾಗುತ್ತವೆ. ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಹೊಸ ಅನುಭವವನ್ನು ಗಳಿಸಿ, ತನ್ನ ಸಾಮರ್ಥ್ಯವನ್ನು ಅರಿತುಕೊಳ್ಳುವುದರಿಂದ ಅರ್ಧ ವಿಜೇತನಾಗಿರುತ್ತಾನೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಸ್ಪರ್ಧೆ ಅಥವಾ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಲು ಹಿಂಜರಿಯಬಾರದು ಎಂದು ಹೇಳಿದರು.
ವಿದ್ಯಾರ್ಥಿಗಳು ವೈಫಲ್ಯಗಳಿಗೆ ಹೆದರದೆ, ಅವುಗಳಿಂದ ಪಾಠ ಕಲಿಯಬೇಕು. ಪ್ರತಿಯೊಂದು ಅನುಭವವೂ ಕಲಿಕೆಗೆ ಅವಕಾಶವಾಗಿದ್ದು, ಇತರರಿಂದ ದೊರೆಯುವ ಪ್ರತಿಕ್ರಿಯೆಗಳನ್ನು ಸ್ವೀಕರಿಸಿ ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ಸುಧಾರಿಸಿಕೊಳ್ಳಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳುವುದರ ಜೊತೆಗೆ, ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳು ಬೆಳೆಯುತ್ತವೆ. ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಜೊತೆಗೆ ಕೌಶಲ್ಯಾಭಿವೃದ್ಧಿಗೂ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.
ಎಸ್ಡಿಎಂಐಟಿ ಪ್ರಾಂಶುಪಾಲರಾದ ಡಾ. ಸಂದೀಪ್ ಆರ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಪಿಯುಸಿ ಮತ್ತು ಡಿಪ್ಲೊಮಾ ಕಾಲೇಜುಗಳ ಪ್ರಾಂಶುಪಾಲರು, ಆಹ್ವಾನಿತ ಗಣ್ಯರು, ಅಧ್ಯಾಪಕರು, ವಿದ್ಯಾರ್ಥಿ ಸಂಯೋಜಕರಾದ ಸುಭಾಷ್ ಹೆಗ್ಡೆ, ವೈಷ್ಣವಿ ವಿನೋದ್, ಸಾತ್ವಿಕ್ ಹೆಬ್ಬಾರ್ ಪಿ. ಮತ್ತು ಶಾರದಾ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಂಧೂರಾ ಮತ್ತು ತಂಡದವರು ಪ್ರಾರ್ಥನೆ ಹಾಡಿದರು. ಡಾ.ವಿದ್ಯಾ ಕೆ. ಸ್ವಾಗತಿಸಿದರು.ವಿದ್ಯಾರ್ಥಿಗಳಾದ ಪಲ್ಲವಿ ಹಾಗೂ ಸಂಜಯ್ ನಿರೂಪಿಸಿದರು. ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸ್ಪರ್ಧೋತ್ಸವದ ಆಯೋಜನೆ ಮತ್ತು ನಿರ್ವಹಣೆಯಲ್ಲಿ ಸಹಕರಿಸಿದರು. ಡಾ. ವಿದ್ಯಾ ಕೆ, ಡಾ. ರವೀಶ್ ಪಡುಮಲೆ ಮತ್ತು ಡಾ. ಶೋಭಾ ಪಿ ಕಾರ್ಯಕ್ರಮವನ್ನು ಸಂಯೋಜಿಸಿದರು.
ಲಕ್ಷಕ್ಕೂ ಅಧಿಕ ಬಹುಮಾನದ ವಿವಿಧ ಸ್ಪರ್ಧೆಗಳು :
ಸ್ಪರ್ಧೋತ್ಸವದಲ್ಲಿ ಪಿಯುಸಿ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ರಸಪ್ರಶ್ನೆ, ನವೀನ ಮಾದರಿ ಪ್ರದರ್ಶನ, ಚರ್ಚಾಸ್ಪರ್ಧೆ, ಟ್ರೆಷರ್ ಹಂಟ್, ಐಡಿಯಾಥಾನ್, ಸಾಂಸ್ಕೃತಿಕ ವೈವಿಧ್ಯ ಪ್ರದರ್ಶನ ಹಾಗೂ ಕ್ರಿಕೆಟ್ ಮತ್ತು ಫುಟ್ಬಾಲ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಉದ್ಯಮಶೀಲತಾ ಪರಿಕಲ್ಪನೆಗಳ ಪ್ರಸ್ತುತಿ, ರಿವರ್ಸ್ ಪ್ಲೇಸ್ಮೆಂಟ್, ಕೇಸ್ ಸ್ಟಡಿ, ಕೃತಕ ಬುದ್ಧಿಮತ್ತೆ ಆಧಾರಿತ ಪ್ರಾಂಪ್ಟ್ ಚಾಲೆಂಜ್, ತಾಂತ್ರಿಕ ಟ್ರೆಷರ್ ಹಂಟ್, ಪ್ರಾಜೆಕ್ಟ್ ಮತ್ತು ನಾವೀನ್ಯತೆ ಪ್ರದರ್ಶನ, ಪ್ರತಿಭಾ ಪ್ರದರ್ಶನ, ಸ್ಪರ್ಧೋತ್ಸವದ ರೀಲ್ ಸ್ಪರ್ಧೆ ಹಾಗೂ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಯಿತು. ವಿಜೇತರಿಗೆ ಲಕ್ಷಕ್ಕೂ ಹೆಚ್ಚಿನ ಮೊತ್ತದ ಬಹುಮಾನವನ್ನು ಏರ್ಪಡಿಸಲಾಗಿತ್ತು.












