ಉಜಿರೆ: ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ (ರಾಜ್ಯ ಪಠ್ಯಕ್ರಮ)ದಲ್ಲಿ ನ.14ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನದ ಸ್ಮರಣಾರ್ಥ ಆಚರಿಸಲ್ಪಡುವ ಮಕ್ಕಳ ದಿನಾಚರಣೆಯ ಅಂಗವಾಗಿ ಬೆಳಿಗ್ಗೆ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಕ್ರೀಡಾಸ್ಫೂರ್ತಿಯನ್ನು ಮೆರೆದರು.
ಮಧ್ಯಾಹ್ನ ನಡೆದ ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಚರಣೆಗೆ ವಿಶೇಷ ಮೆರುಗು ನೀಡಿದವು. ಶಿಕ್ಷಕರು ಮಕ್ಕಳಿಗಾಗಿ ಹಾಡು, ನೃತ್ಯ ಹಾಗೂ ಹಾಸ್ಯಭರಿತ ಪ್ರದರ್ಶನಗಳನ್ನು ನೀಡಿ ಎಲ್ಲರ ಮನ ಗೆದ್ದರು. ಶಿಕ್ಷಕರ ಈ ವಿಶೇಷ ಪ್ರದರ್ಶನಗಳು ಮಕ್ಕಳಲ್ಲಿ ಅಪಾರ ಸಂತಸ ಮತ್ತು ಉತ್ಸಾಹ ಮೂಡಿಸಿದವು.
ಬೆಳಿಗ್ಗೆ ಆಯೋಜಿಸಿದ್ದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಶೋಭಾ ಅವರು ನಿರೂಪಣೆ ನಡೆಸಿಕೊಟ್ಟರು. ಶಿಕ್ಷಕಿ ರೇಷ್ಮಾ ಅವರು ಮಕ್ಕಳ ದಿನಾಚರಣೆಯ ಮಹತ್ವ ಹಾಗೂ ದಿನದ ವಿಶೇಷತೆಯನ್ನು ತಿಳಿಸಿಕೊಟ್ಟರು. ಶಾಲೆಯ ಮುಖ್ಯೋಪಾಧ್ಯಾಯರಾದ ವಿದ್ಯಾಲಕ್ಷ್ಮಿ ಎನ್. ನಾಯಕ್ ಅವರು ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳನ್ನು ಕೋರಿ, ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.














