ಬೆಳ್ತಂಗಡಿ: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕರಾದ ವಿಪಿನ್ ನಾಯ್ಕ್ ಎನ್. ಎಸ್. ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರ, ವಿಷಯದಲ್ಲಿ ಡಾಕ್ಟರೇಟ್ (ಪಿಎಚ್.ಡಿ.) ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಅವರು ಸಲ್ಲಿಸಿದ ಸ್ಟಡಿ ಆಫ್ ಹೆವಿ ಮೆಸಾನ್ ಸ್ಪೆಕ್ಷಮ್ ಅಂಡ್ ಡೀಕೇಸ್ ಇನ್ ದಿ ಫೋವ್ವರ್ಕ್ ಆಫ್ ಕ್ಲಾರ್ಕ್ ಮೋಡೆಲ್ಸ್’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಈ ಪದವಿ ಲಭಿಸಿದೆ
ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ, ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಬಿ. ವಿಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಸೈದ್ಧಾಂತಿಕ ಸಂಶೋಧನೆ ನಡೆಸಿರುವ ಇವರು, ಭೌತಶಾಸ್ತ್ರ, ವಿಷಯದಲ್ಲಿ NET ಹಾಗೂ KSET ಅರ್ಹತೆ ಕೂಡ ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಗಳಲ್ಲಿ 6 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವುದರ ಜೊತೆಗೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ 25ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರು ಬೆಳ್ತಂಗಡಿ ತಾಲೂಕಿನ ನಾಳದ ಸತೀಶ್ ನಾಯ್ಕ್ ಮತ್ತು ಉಷಾ ದಂಪತಿ ಪುತ್ರ.
ಪ್ರಸ್ತುತ ಡಾ.ವಿಪಿನ್ ನಾಯ್ಕ್ ಕಾಲೇಜಿನ ಶೈಕ್ಷಣಿಕ ವಿಭಾಗದ ಉಪಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.














