November 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಮಸ್ಯೆ

ಕಿತ್ತುಹೋದ ಪದ್ಮುಂಜ ಮುಖ್ಯರಸ್ತೆಯ ಫೈಬರ್ ಹಂಪ್ಸ್‌ಗಳು: ವಾಹನ ಸವಾರರಿಗೆ ತೊಂದರೆ

ಬೆಳ್ತಂಗಡಿ: ಪದ್ಮುಂಜ ಪೇಟೆಯ ಮುಖ್ಯ ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿ ಅಳವಡಿಸಲಾಗಿದ್ದ ಫೈಬರ್ ಹಂಪ್ಸ್‌ಗಳು ಕಾಲಕ್ರಮೇಣ ಹದಗೆಟ್ಟು, ಕೆಲವು ಭಾಗಗಳು ಕಿತ್ತುಹೋಗಿವೆ. ಹಂಪ್ಸ್‌ಗಳನ್ನು ರಸ್ತೆಗೆ ಭದ್ರಪಡಿಸಲು ಬಳಸಲಾಗಿದ್ದ ಹ್ಯಾಂಕರ್ ಬೋಲ್ಡ್‌ಗಳು ಹೊರಬಂದು ರಸ್ತೆಯಲ್ಲೇ ಬಿದ್ದಿರುವುದರಿಂದ ವಾಹನಗಳ ಟಯರ್‌ಗಳಿಗೆ ಹಾನಿಯಾಗುವ ಅಪಾಯ ಹೆಚ್ಚಾಗಿದೆ. ಈಗಾಗಲೇ ಟಯರ್ ಪಂಕ್ಚರ್ ಆಗಿರುವ ಪ್ರಕರಣ ವರದಿಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಈ ರಸ್ತೆಯಲ್ಲಿ ಪ್ರತಿದಿನ ವಾಹನ ಸವಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ರಸ್ತೆಯಲ್ಲಿರುವ ಬೋಲ್ಟ್‌ಗಳು ದ್ವಿಚಕ್ರ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿದ್ದು, ರಾತ್ರಿ ವೇಳೆ ಅಥವಾ ಮಳೆಗಾಲದಲ್ಲಿ ಅವುಗಳನ್ನು ಗಮನಿಸುವುದು ಕಷ್ಟಸಾಧ್ಯವಾಗಿದೆ. ಇದರಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಹೆಚ್ಚಾಗಿದೆ.

ವಾಹನಗಳ ವೇಗ ನಿಯಂತ್ರಣ ಹಾಗೂ ರಸ್ತೆ ಸುರಕ್ಷತೆಗಾಗಿ ಅಳವಡಿಸಲಾದ ಹಂಪ್ಸ್‌ಗಳೇ ಇದೀಗ ಅಪಾಯದ ಮೂಲವಾಗಿರುವುದು ವಿಪರ್ಯಾಸವಾಗಿದೆ. ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕಾದ ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯದಿಂದ ಇಂತಹ ಸಮಸ್ಯೆಗಳು ಉಂಟಾಗುತ್ತಿವೆ ಎಂಬ ಅಭಿಪ್ರಾಯ ನಾಗರಿಕರಿಂದ ವ್ಯಕ್ತವಾಗಿದೆ.

ಪದ್ಮುಂಜ ಪೇಟೆಯಲ್ಲಿ ಹದಗೆಟ್ಟಿರುವ ಫೈಬರ್ ಹಂಪ್ಸ್‌ಗಳನ್ನು ಕೂಡಲೇ ತೆರವುಗೊಳಿಸಿ ಅಥವಾ ಸೂಕ್ತ ರೀತಿಯಲ್ಲಿ ದುರಸ್ತಿಗೊಳಿಸಬೇಕು. ರಸ್ತೆಯಲ್ಲಿರುವ ಹ್ಯಾಂಕರ್ ಬೋಲ್ಡ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ, ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ, ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಗಂಭೀರತೆಯನ್ನು ಪರಿಶೀಲಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕು. ಯಾವುದೇ ಅಪಘಾತ ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ರಸ್ತೆಯನ್ನು ಸುರಕ್ಷಿತಗೊಳಿಸಬೇಕೆಂಬುದು ಪದ್ಮುಂಜ ಪೇಟೆಯ ನಾಗರಿಕರ ಒಕ್ಕೊರಲಿನ ಆಗ್ರಹವಾಗಿದೆ.

Related posts

ಮುಂಡಾಜೆ: ಭಾರತೀಯ ಸೇನೆಯಲ್ಲಿ ಉದ್ಯೋಗ ಅವಕಾಶಗಳು ಹಾಗೂ ಆಯ್ಕೆ ಪ್ರಕ್ರಿಯೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂ.ಅ.ಸೆ. ಶಾಲೆಯ ವಿದ್ಯಾರ್ಥಿ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಮೇ 17: ಜಯನಗರ-ಗುರಿಪಳ್ಳದಲ್ಲಿ 50ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರ

Suddi Udaya

ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದಲ್ಲಿ ಉಚಿತ ಯೋಗ ಶಿಬಿರ

Suddi Udaya

ಬಜಿರೆ ಪಾಲ್ದ್ಯಾರು ಮನೆಯ ಶ್ರೀಮತಿ ಚಿನ್ನಮ್ಮ ನಿಧನ

Suddi Udaya

ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ: 130 ಕೋಟಿ ವ್ಯವಹಾರ- ರೂ.17.92 ಲಕ್ಷ ಲಾಭ -ಶೇ 14 ಡಿವಿಡೆಂಟ್

Suddi Udaya
error: Content is protected !!