31.8 C
ಪುತ್ತೂರು, ಬೆಳ್ತಂಗಡಿ
October 3, 2026
ಜಿಲ್ಲಾ ಸುದ್ದಿ

ಮಂಗಳೂರಿನಲ್ಲಿ BMS ಬೃಹತ್ ಪ್ರತಿಭಟನೆ

ಮಂಗಳೂರು: ಕಾರ್ಮಿಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಮಂಗಳವಾರ ಮಂಗಳೂರಿನ ರಾಜಾಜಿ ಪಾರ್ಕ್‌ನಲ್ಲಿ ಬೃಹತ್ ಕಾರ್ಮಿಕ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ ಅವರು, ಕಾರ್ಮಿಕರ ದುಡಿಮೆಯೇ ದೇಶದ ಆರ್ಥಿಕ ಅಭಿವೃದ್ಧಿಯ ಆಧಾರ. ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಉತ್ತಮ ವೇತನ ಮತ್ತು ಗೌರವಯುತ ಜೀವನ ದೊರೆತಾಗ ಮಾತ್ರ ದೇಶದ ಅಭಿವೃದ್ಧಿ ಸಮಗ್ರವಾಗುತ್ತದೆ. ಕೇಂದ್ರ ಸರ್ಕಾರವು ಕಾರ್ಮಿಕರ ಬೇಡಿಕೆಗಳನ್ನು ವಿಳಂಬ ಮಾಡದೆ ಗಂಭೀರವಾಗಿ ಪರಿಗಣಿಸಬೇಕು.‌
ಕಾರ್ಮಿಕರ ಹಕ್ಕುಗಳಿಗೆ ಧಕ್ಕೆಯಾಗುವ ಅಂಶಗಳನ್ನು ಪರಿಶೀಲಿಸಿ ಅಗತ್ಯ ತಿದ್ದುಪಡಿ ಮಾಡುವುದು ಹಾಗೂ ಕಾರ್ಮಿಕರಿಗೆ ಗೌರವಯುತ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದರು.

ಕಾರ್ಮಿಕರ 11 ಪ್ರಮುಖ ರಾಷ್ಟ್ರೀಯ ಬೇಡಿಕೆಗಳನ್ನು ವಿವರವಾಗಿ ಮಂಡಿಸಿ, ಕೇಂದ್ರ ಸರ್ಕಾರವು ಕಾರ್ಮಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಆಶಾ, ಅಂಗನವಾಡಿ, ಅಕ್ಷರ ದಾಸೋಹ, ಎಚ್ಎನ್ಎಂ ಸೇರಿದಂತೆ ಯೋಜನಾ ಕಾರ್ಮಿಕರಿಗೆ ಗೌರವಧನ ಮತ್ತು ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಅವರು ಮಂಡಿಸಿ, ಗ್ರಾಚ್ಯುಟಿ
ಪಿಂಚಣಿ, ತುಟ್ಟಿ ಭತ್ಯೆ, ಬೋನಸ್, ವೈದ್ಯಕೀಯ ಸೌಲಭ್ಯ, ಇಎಸ್ಐ, ಪಿಎಫ್ಇ
ವೇತನ ಮಿತಿ ಹೆಚ್ಚಳಕ್ಕೆ ಆಗ್ರಹಿಸಿದರು.

ಗುತ್ತಿಗೆ ಹಾಗೂ ಹೊರಗುತ್ತಿಗೆ ಕಾರ್ಮಿಕರಿಗೆ ಕಾನೂನುಬದ್ಧ ಸೌಲಭ್ಯ, ಉದ್ಯೋಗ ಭದ್ರತೆ ಒದಗಿಸಬೇಕು.‌
ಬ್ಯಾಂಕ್ ನೌಕರರಿಗೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೊಳಿಸಬೇಕು ಎಂದರು.

ಬಿಎಂಎಸ್ ದ.ಕ.‌
ಜಿಲ್ಲಾಧ್ಯಕ್ಷ ವಕೀಲ ಅನಿಲ್ ಕುಮಾರ್ ಯು ಮಾತನಾಡಿ, ಇಂದು ನಾವು ಯಾರ ವಿರುದ್ಧವೂ ಹೋರಾಟ ಮಾಡುತ್ತಿಲ್ಲ. ಕಾರ್ಮಿಕರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಒಗ್ಗೂಡಿದ್ದೇವೆ. ನಮ್ಮ ಹೋರಾಟ ಶಾಂತಿಯುತ, ಪ್ರಜಾಪ್ರಭುತ್ವದ ಮತ್ತು ಕಾರ್ಮಿಕರ ಹಕ್ಕುಗಳ ಹೋರಾಟವಾಗಿದೆ ಎಂದರು.

ಕಟ್ಟಡ ಕಾರ್ಮಿಕರಿಂದ ರಿಕ್ಷಾ ಚಾಲಕರವರೆಗೆ, ಆಶಾ–ಅಂಗನವಾಡಿಯಿಂದ ಬೀಡಿ ಹಾಗೂ ಮನೆ ಆಧಾರಿತ ಕಾರ್ಮಿಕರವರೆಗೆ, ರಬ್ಬರ್–ಕೃಷಿಯಿಂದ ಕೈಗಾರಿಕಾ ಮತ್ತು ಅಸಂಘಟಿತ ವಲಯದವರೆಗೆ ಜಿಲ್ಲೆಯ ವಿವಿಧ ಕ್ಷೇತ್ರಗಳ ಕಾರ್ಮಿಕರು ಒಂದೇ ವೇದಿಕೆಯಲ್ಲಿ ಸೇರಿರುವುದು ದಕ್ಷಿಣ ಕನ್ನಡದ ಕಾರ್ಮಿಕ ಒಗ್ಗಟ್ಟಿನ ಪ್ರತೀಕವಾಗಿದೆ ಎಂದು ಹೇಳಿದರು.

ಕೆಲಸದ ಕ್ಷೇತ್ರ ಬೇರೆ ಇರಬಹುದು. ಆದರೆ ಕಾರ್ಮಿಕರ ಮೂಲ ಸಮಸ್ಯೆಗಳು ಒಂದೇ ಆಗಿದೆ. ನ್ಯಾಯಯುತ ವೇತನ, ಉದ್ಯೋಗ ಭದ್ರತೆ, ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆ” ಎಂದು ಅವರು ಹೇಳಿದರು.

ಎಂಆರ್ ಪಿಎಲ್, ಎನ್ಎಂಪಿಟಿ, ಕೆಐಒಸಿಎಲ್ ಸೇರಿದಂತೆ ದೊಡ್ಡ ಕೈಗಾರಿಕೆಗಳ ಜೊತೆಗೆ ಸಣ್ಣ ಕೈಗಾರಿಕೆ, ಹೋಟೆಲ್, ಪ್ರವಾಸೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳೂ ಬೆಳೆಯಬೇಕು. ಆದರೆ ಉದ್ಯಮ ಉಳಿಯಲಿ, ಉದ್ಯೋಗ ಉಳಿಯಲಿ, ಕಾರ್ಮಿಕರ ಹಕ್ಕು ಕೂಡ ಉಳಿಯಲಿ ಎಂಬುದು ಬಿಎಂಎಸ್ ನ ನಿಲುವು ಎಂದರು.

ಕರ್ನಾಟಕದಲ್ಲಿ ಈಗಾಗಲೇ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಕಡಿಮೆ ಮಾಡಬಾರದು. ಬೆಲೆ ಏರಿಕೆ ಮತ್ತು ಜೀವನ ವೆಚ್ಚವನ್ನು ಪರಿಗಣಿಸಿ ಕಾರ್ಮಿಕರ ವೇತನ ರಕ್ಷಣೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಅವರು ಆಗ್ರಹಿಸಿದರು.

ನಮ್ಮ ಬಳಿ ಅಧಿಕಾರ ಇರದಿರಬಹುದು, ಆದರೆ ಸಂಘಟನೆಯ ಶಕ್ತಿ ಇದೆ. ನಮ್ಮ ಬಳಿ ದೊಡ್ಡ ಸಂಪತ್ತು ಇರದಿರಬಹುದು, ದುಡಿಮೆಯ ಶಕ್ತಿ ಇದೆ. ನಮ್ಮ ದೊಡ್ಡ ಶಕ್ತಿ ಕಾರ್ಮಿಕರ ಒಗ್ಗಟ್ಟು ಎಂದು ಅನಿಲ್ ಕುಮಾರ್ ಹೇಳಿದರು.

ಇಂದಿನ ಪ್ರತಿಭಟನೆ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ಮನವಿ ಸಲ್ಲಿಕೆ, ಸರ್ಕಾರದ ಸ್ಪಂದನೆ, ನಿರಂತರ ಅನುಸರಣೆ ಹಾಗೂ ಅಗತ್ಯವಿದ್ದರೆ ಮುಂದಿನ ಹೋರಾಟದ ಮೂಲಕ ಕಾರ್ಮಿಕರ ಬೇಡಿಕೆಗಳನ್ನು ಪರಿಹಾರದ ದಿಕ್ಕಿನಲ್ಲಿ ಕೊಂಡೊಯ್ಯಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಬಿಎಂಎಸ್ ನಿಕಟ ಪೂರ್ವ ರಾಜ್ಯ ಉಪಾಧ್ಯಕ
ಭಗವಾನ್ ದಾಸ್ ಮಾತನಾಡಿ, ಸರ್ಕಾರಗಳು ಕಾರ್ಮಿಕರ ಸಮಸ್ಯೆಗಳಿಗೆ ಆದ್ಯತೆ ನೀಡಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

ಬಿಎಂಎಸ್ ನ ವಿವಿಧ ಸಂಘಟನೆಗಳ ರಾಜ್ಯ ಹಾಗೂ ಜಿಲ್ಲಾ ಪ್ರಮುಖರುಗಳಾದ
ರೋಹಿತಾಶ್ವ, ವಸಂತ ಕುಮಾರ್ ಮಣಿಹಳ್ಳ,
ನಳಿನಿ ಅಡ್ಯಾರ್, ಕುಮಾರನಾಥ ಶೆಟ್ಟಿ ಕಲ್ಮಂಜ, ತುಳಸಿ ದೇವರಾಜ್, ಡೀಲಾಕ್ಷಿ, ಸುಧೀoದ್ರ , ಜಯರಾಜ್ ಸಾಲ್ಯಾನ್, ಗಿರಿಜ ರವರುಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿ ಬೇಡಿಕೆಗೆ ಆಗ್ರಹಿಸಿದರು.‌

ಪ್ರತಿಭಟನೆಯ ಸಂದರ್ಭದಲ್ಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಘೋಷಣೆಗಳ ಮೂಲಕ ಮಂಡಿಸಲಾಯಿತು.
ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಕಟ್ಟಡ, ಆಟೋ–ರಿಕ್ಷಾ, ಆಶಾ–ಅಂಗನವಾಡಿ, ಬೀಡಿ, ರಬ್ಬರ್–ಕೃಷಿ, ಕೈಗಾರಿಕೆ, ಸಾರಿಗೆ, ಅಸಂಘಟಿತ, ಗುತ್ತಿಗೆ–ಹೊರಗುತ್ತಿಗೆ ಸೇರಿದಂತೆ ವಿವಿಧ ಕಾರ್ಮಿಕ ವಲಯಗಳ ಸಮಸ್ಯೆಗಳಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡಿ ಕೇಂದ್ರದ ಗಮನಕ್ಕೆ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಪ್ರತಿಭಟನೆಯ ಬಳಿಕ ಬಿಎಂಎಸ್ ವತಿಯಿಂದ
ದ.ಕ. ಅಪರ ಜಿಲ್ಲಾಧಿಕಾರಿ ರಾಜು ಅವರ ಮೂಲಕ ಕೇಂದ್ರ ಸರಕಾರದ ಪ್ರಧಾನ ಮಂತ್ರಿಯವರಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ ದ.ಕ. ಸಂಸದ ಕ್ಯಾ.‌ ಬ್ರಿಜೇಶ್ ಚೌಟ ಅವರಿಗೂ ಮನವಿ ಸಲ್ಲಿಸಲಾಯಿತು.

ಬಿಎಂಎಸ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಸ್ವಾಗತಿಸಿ, ರಿಕ್ಷಾ ಕಾರ್ಮಿಕರ ಪ್ರಮುಖ ಉಮಾಶಂಕರ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಪ್ರಮುಖರಾದ ವಿಗ್ನೇಶ್ ಧನ್ಯವಾದವಿತ್ತರು.

ದಕ್ಷಿಣ ಕನ್ನಡ ಜಿಲ್ಲೆಯ ಸಂಘಟಿತ ವಲಯ ಮತ್ತು ಅಸಂಘಟಿತ ವಲಯದ ಕಾರ್ಮಿಕರ ಸಂಘಟನೆಗಳಾದ ಬ್ಯಾಂಕ್,ಎಮ್ ಆರ್ ಪಿಎಲ್, ಎನ್ ಎಮ್ ಪಿ ಟಿ, ಕುದುರೆಮುಖ, ಕಟ್ಟಡ, ಆಟೋ–ರಿಕ್ಷಾ, ಬೀಡಿ, ಆಶಾ–ಅಂಗನವಾಡಿ, ರಬ್ಬರ್–ಕೃಷಿ, ಕೈಗಾರಿಕೆ, ಸಾರಿಗೆ, ಗುತ್ತಿಗೆ–ಹೊರಗುತ್ತಿಗೆ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರು, ಬಿಎಂಎಸ್ ಪದಾಧಿಕಾರಿಗಳು ಹಾಗೂ ವಿವಿಧ ಯೂನಿಯನ್‌ಗಳ ಪ್ರಮುಖರು ಮತ್ತು ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related posts

ನೇತಾಜಿ ಸುಭಾಶ್ ಚಂದ್ರ ಬೋಸ್ ಆವಾಸೀಯ ವಿದ್ಯಾಲಯ ಮುಗುಳಿ ಶಾಲೆಗೆ ಆವರಣ ಗೋಡೆ ನಿರ್ಮಿಸುವ ಮತ್ತು ಭದ್ರತಾ ಸಿಬ್ಬಂದಿ ನೇಮಕ ಮಾಡುವಂತೆ ಜಿಲ್ಲಾ ಕೆ.ಡಿ.ಪಿ ಸದಸ್ಯ ಸಂತೋಷ್ ಕುಮಾರ್ ರಿಂದ ಜಿಲ್ಲಾಧಿಕಾರಿಗೆ ಮನವಿ

Suddi Udaya

ವಿಧಾನ ಸಭಾ ಚುನಾವಣೆ: ಬಿಜೆಪಿ ಪ್ರಥಮ ಪಟ್ಟಿ ಬಿಡುಗಡೆ- ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ ಹಾಲಿ ಶಾಸಕ ಹರೀಶ್ ಪೂಂಜ ಹೆಸರು ಘೋಷಣೆ

Suddi Udaya

ಶ್ರೀರತ್ನಾತ್ರಯ ಜೈನ ಸಂಘ ದಿಂದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ರಿಗೆ ಮನವಿ: ಜೈನ ಧರ್ಮೀಯರಿಗೆ ಪ್ರತ್ಯೇಕ ನಿಗಮ ರಚನೆ ಸಚಿವರ ಭರವಸೆ

Suddi Udaya

ಉಜಿರೆ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದಿಂದ ಸಂಸದರಾದ ಕ್ಯಾ| ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಕೆ

Suddi Udaya

ಬೆಳ್ತಂಗಡಿ: ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ರವರಿಗೆ ಕಾಂಗ್ರೆಸ್ ನಿಂದ ಭವ್ಯ ಸ್ವಾಗತ

Suddi Udaya

ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ, ಇದರ ನೂತನ ಅಧ್ಯಕ್ಷರಾಗಿ ಮಿತ್ತಬಾಗಿಲು ಕಕ್ಕೆನೇಜಿ ಶಿವಾನಂದ ರಾವ್ ಆಯ್ಕೆ

Suddi Udaya
error: Content is protected !!