32.3 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ನೆರಿಯ ಗ್ರಾಮ ಸಮಿತಿ ವತಿಯಿಂದ ಜನಜಾಗೃತಿ ಸಭೆ

ಬೆಳ್ತಂಗಡಿ: ಪಶ್ಚಿಮ ಘಟ್ಟ ಸೇರಿದಂತೆ ಅರಣ್ಯ ಸಂರಕ್ಷಣೆಯನ್ನು ಸ್ವಾಗತಿಸುತ್ತಾ ಜನರ ಬದುಕನ್ನು ನಾಶಪಡಿಸುವ ಕಸ್ತೂರಿರಂಗನ್ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಅದರ ವಿರುದ್ಧ ಜನಜಾಗೃತಿ ಮೂಡಿಸುವ ಜೊತೆಗೆ ತೀವ್ರ ಸ್ವರೂಪದ ಹೋರಾಟಕ್ಕೆ ಜನರು ಮುಂದಾಗಬೇಕು ಎಂದು ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ತಾಲೂಕು ಸಂಚಾಲಕ ರಕ್ಷಿತ್ ಶಿವರಾಂ ಕರೆ ನೀಡಿದರು.

ಅವರು ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ನೆರಿಯ ಗ್ರಾಮ ಸಮಿತಿ ವತಿಯಿಂದ ನೆರಿಯ ಗ್ರಾಮ ಪಂಚಾಯತ್ ಆವರಣದಲ್ಲಿ ಆ.16 ರಂದು ನಡೆದ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ಮಣ್ಣಿನ ಮೂಲನಿವಾಸಿಗಳು ಸೇರಿದಂತೆ ಜನಸಾಮಾನ್ಯರ ಆಚರಣೆ, ಸಂಸ್ಕೃತಿ, ಧಾರ್ಮಿಕತೆಯನ್ನು ನಾಶ ಮಾಡುವ ಈ ವರದಿ ಅತ್ಯಂತ ಅವೈಜ್ಞಾನಿಕವಾಗಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಜನಸಾಮಾನ್ಯರ ಜೀವನದ ಜೊತೆಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ, ವರದಿಯನ್ನು ಜಾರಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ ಅವರು 2014 ರಿಂದ 6 ಬಾರಿ ಕಸ್ತೂರಿರಂಗನ್ ವರದಿಯನ್ನು ರಾಜ್ಯ ಸರ್ಕಾರಗಳು ವಿರೋಧಿಸಿದರೂ ಮತ್ತೆ 7 ನೇ ಬಾರಿ ಅಧಿಸೂಚನೆ ಹೊರಡಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟ್ ಅಧ್ಯಕ್ಷ ಯು.ಸಿ ಪೌಲೋಸ್ ಮಾತನಾಡಿ ಕಸ್ತೂರಿರಂಗನ್ ವರದಿ ವಿರುದ್ಧ ಜಾತಿ, ಧರ್ಮ. ಪಕ್ಷದ ಭೇದ ಮರೆತು ಒಗ್ಗಟ್ಟಿನ ಹೋರಾಟ ಅಗತ್ಯವಿದೆ ಎಂದರು. ಗಂಡಿಬಾಗಿಲು ಸಂತ ಥೋಮಸ್ ಚರ್ಚ್ ನ ಧರ್ಮಗುರು ರೆ.ಫಾ. ಬಿನೋಯ್ ರವರು ಮಾತನಾಡಿ ವರದಿಯಲ್ಲಿ ಹಲವು ಜನ ವಿರೋಧಿ ಅಂಶಗಳಿದ್ದು, ಇಂತಹ ವರದಿಯಿಂದ ಜನಸಾಮಾನ್ಯರ ಬದುಕುವ ಹಕ್ಕನ್ನು ಕಸಿಯುವ ಸಾಧ್ಯತೆಯಿದೆ, ಇದರ ವಿರುದ್ಧದ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದರು. ನೆರಿಯ ಬದ್ರಿಯಾ ಜುಮ್ಮಾ ಮಸೀದಿ ಧರ್ಮಗುರು ಮಹಮ್ಮದ್ ಸರ್ವಾಣಿ ಮಾತನಾಡಿ ಇಂತಹ ಜನವಿರೋಧಿ ವರದಿಯ ವಿರುದ್ಧ ನಾವೆಲ್ಲರೂ ಮನುಷ್ಯರೆಂಬ ಸೌಹಾರ್ದ ಹೋರಾಟದ ಅಗತ್ಯವಿದೆ. ಜಾತಿ, ಧರ್ಮವನ್ನು ಹೊರಗಿಟ್ಟು ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದರು.

ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಸಹ ಸಂಚಾಲಕ ಬಿ.ಎಂ ಭಟ್ ಮಾತನಾಡಿ ವರದಿಯು ಅತ್ಯಂತ ಅವೈಜ್ಞಾನಿಕವಾಗಿದ್ದು, ಜನಸಾಮಾನ್ಯರ ವಿರೋಧವನ್ನು ಬಲಪಡಿಸುವ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ. ಕೇಂದ್ರ ಸರ್ಕಾರ ನಿರಂತರವಾಗಿ ಜನರ ವಿರುದ್ಧ ಕಾನೂನು, ಕಾಯ್ದೆ ಜಾರಿ ಮಾಡಿ ಜನರ ಜೀವನದಲ್ಲಿ ಆಟವಾಡುತ್ತಿದೆ. ಇಂತಹ ಸರ್ಕಾರದ ವಿರುದ್ಧ ಜನರು ಇನ್ನಷ್ಟು ಪ್ರಬಲ ಹೋರಾಟಕ್ಕೆ ಮುಂದಾಗಬೇಕು ಎಂದರು.


ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಗ್ರಾಮ ಸಮಿತಿ ಅಧ್ಯಕ್ಷ ಪಿ.ಕೆ ರಾಜನ್ ಜನಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ತಾಲೂಕು ಸಹ ಸಂಚಾಲಕರಾದ ಲಕ್ಷ್ಮಣ ಆಲಂಗಾಯಿ, ಜಯಾನಂದ ಪಿಲಿಕಲ, ಲಕ್ಷ್ಮಣ ಗೌಡ, ಪಿ.ಟಿ ಸೆಬಾಸ್ಟಿಯನ್ ಕಳೆಂಜ, ಶೇಖರ್ ಲಾಯಿಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ನಮಿತಾ ಪೂಜಾರಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್, ವಿವಿಧ ದೇವಸ್ಥಾನ, ದೇವಸ್ಥಾನಗಳ ಆಡಳಿತ ಮಂಡಳಿ ಮುಖ್ಯಸ್ತರಾದ ಜಯದೇವ್, ಕೃಷ್ಣ ಬಾಂಜಾರು, ರುಕ್ಷ್ಮಯ್ಯ ಗೌಡ, ಗಿರೀಶ್ ನೆಕ್ಕರೆ, ಮಂಜಪ್ಪ ಕೋಲೋಡಿ, ಸುಧಾಕರ ಆಲಂಗಾಯಿ, ಕಾಂತಪ್ಪ ಆಲಂಗಾಯಿ, ಶಂಕರ್ ಅಂಬಟೆಮಲೆ, ಕು ಪುಷ್ಪ ಕಾಟಾಜೆ, ವಿ.ಡಿ ಥೋಮಸ್, ರಮೇಶ್ ಕೆ.ಎಸ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಸ್ತೂರಿರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಗ್ರಾಮ ಸಮಿತಿ ಕಾರ್ಯದರ್ಶಿ ಸೆಬಾಸ್ಟಿಯನ್ ಎಂ.ಜೆ ನಿರೂಪಿಸಿ, ತಾಲೂಕು ಸಹ ಸಂಚಾಲಕ ಬಿ. ಅಶ್ರಪ್ ನೆರಿಯ ಧನ್ಯವಾದವಿತ್ತರು.

Related posts

ಅವಳಿ‌ ಕರುಗಳಿಗೆ ಜನ್ಮ ನೀಡಿದ ಗೋಮಾತೆ

Suddi Udaya

ಕರಾವಳಿಯ ಕೋಳಿ ರೈತರ ಹಿತರಕ್ಷಣೆಗಾಗಿ ದನಿಯಾದ ‘ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ: ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆ

Suddi Udaya

ರಾಜ್ಯಮಟ್ಟದ ಹ್ಯಾಂಡ್‌ಬಾಲ್ : ಉಜಿರೆಯ ಎಸ್.ಡಿ.ಎಂ ಗೆ ಅವಳಿ ಪ್ರಶಸ್ತಿ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿಯ ಗೌರವ

Suddi Udaya

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಹುಟ್ಟುಹಬ್ಬ ; ಶಿವಮೊಗ್ಗದಲ್ಲಿ ಭೇಟಿ ಮಾಡಿ ಶುಭಾಶಯ ತಿಳಿಸಿದ ಶಾಸಕ ಹರೀಶ್ ಪೂಂಜ

Suddi Udaya

ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭೆ

Suddi Udaya
error: Content is protected !!