ಉಜಿರೆ, : ಎಸ್‌ಡಿಎಂ ಪಿಯು ಕಾಲೇಜು, ಉಜಿರೆಯ ವಾಣಿಜ್ಯ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದತ್ತ ಉತ್ತಮ ಮಾರ್ಗದರ್ಶನ ನೀಡುವ ಉದ್ದೇಶದಿಂದ ಸಿಎ ಫೌಂಡೇಶನ್ ತರಬೇತಿ ತರಗತಿಯನ್ನು ಅ. 3ರಂದು ಉದ್ಘಾಟಿಸಲಾಯಿತು.
ಪರೀಕ್ಷಾ ಅಕಾಡೆಮಿಯ ಸಿಎಸ್ ಹರ್ಷಿಳಾ ಅವರು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ವಿಷಯದ ಮೂಲ ಪರಿಕಲ್ಪನೆಗಳ ಸ್ಪಷ್ಟ ಅರಿವು, ನಿರಂತರ ಅಭ್ಯಾಸ ಹಾಗೂ ಶಿಸ್ತುಬದ್ಧ ತಯಾರಿ ಅತ್ಯಂತ ಮುಖ್ಯ ಎಂದು ತಿಳಿಸಿದರು. ವಿದ್ಯಾರ್ಥಿಗಳು ತರಬೇತಿ ತರಗತಿಯ ಸದುಪಯೋಗ ಪಡೆದುಕೊಂಡು ತಮ್ಮ ವೃತ್ತಿಪರ ಗುರಿಯನ್ನು ಸಾಧಿಸುವತ್ತ ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಎಸ್‌ಡಿಎಂ ಕಾಲೇಜು, ಉಜಿರೆಯ ಮುಖ್ಯಸ್ಥೆ ಡಾ. ರತ್ನಾವತಿ ಮಾತನಾಡಿ, ವಾಣಿಜ್ಯ ಶಿಕ್ಷಣದ ಮಹತ್ವ ಹಾಗೂ ಅದರಲ್ಲಿರುವ ವಿಶಾಲವಾದ ವೃತ್ತಿ ಅವಕಾಶಗಳ ಕುರಿತು ವಿವರಿಸಿದರು. ತೆರಿಗೆ, ಹಣಕಾಸು ಲೆಕ್ಕಶಾಸ್ತ್ರ ಮತ್ತು ವೆಚ್ಚ ಲೆಕ್ಕಶಾಸ್ತ್ರದಂತಹ ವಿಷಯಗಳ ಮಹತ್ವವನ್ನು ವಿವರಿಸಿದ ಅವರು, ಈ ವಿಷಯಗಳಲ್ಲಿ ವಿದ್ಯಾರ್ಥಿಗಳು ಬಲವಾದ ಪರಿಕಲ್ಪನಾ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ವಾಣಿಜ್ಯ ಹಾಗೂ ವೃತ್ತಿಪರ ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ನಿರಂತರವಾಗಿ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಮೋದ್ ಕುಮಾರ್ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ಹಾಗೂ ಭವಿಷ್ಯಮುಖಿ ಶಿಕ್ಷಣವನ್ನು ನೀಡಲಾಗುತ್ತಿದ್ದು, ಭವಿಷ್ಯದ ಸವಾಲುಗಳು ಮತ್ತು ಅವಕಾಶಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಅಗತ್ಯವಾದ ಜ್ಞಾನ, ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಬೆಳೆಸಲಾಗುತ್ತಿದೆ ಎಂದು ಹೇಳಿದರು. ಸಿಎ ಫೌಂಡೇಶನ್ ತರಬೇತಿಯ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ವೃತ್ತಿಪರ ಗುರಿಯತ್ತ ಮುನ್ನಡೆಯಬೇಕು ಎಂದು ಅವರು ಕರೆ ನೀಡಿದರು.
ಶ್ರೇಷ್ಠಾ ಸ್ವಾಗತಿಸಿದರು. ವೈಷ್ಣವಿ ಕಾರ್ಯಕ್ರಮವನ್ನು ನಿರೂಪಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಬೇಬಿ ಎನ್. ವಂದನಾರ್ಪಣೆ ಸಲ್ಲಿಸಿದರು. ಶೋಭಾ, ಸವಿತಾ ಹಾಗೂ ಪ್ರಭಾವತಿ ಅವರು ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದರು.
ಸಿಎ ಫೌಂಡೇಶನ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಾಣಿಜ್ಯ ವಿದ್ಯಾರ್ಥಿಗಳಿಗೆ ಈ ತರಬೇತಿ ತರಗತಿಯು ಅಗತ್ಯವಾದ ಶೈಕ್ಷಣಿಕ ಮಾರ್ಗದರ್ಶನ ಹಾಗೂ ಉತ್ತಮ ತಯಾರಿಗೆ ಸಹಕಾರಿಯಾಗಲಿದೆ.













